

ಗುರುಪುರ: ಸ್ಪೋಟ ಸಂಭವಿಸಿದ ಎಂಆರ್‌ಪಿಎಲ್ ಸ್ಥಾವರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಶಾಸಕರು ಮಾಧ್ಯಮದೊಂದಿಗೆ ಮಾತನಾಡಿ, ಎಂಆರ್‌ಪಿಎಲ್ ಸ್ಥಾವರದಲ್ಲಿ ಸಂಭವಿಸಿದ ಭಾರಿ ಸ್ಪೋಟಕ್ಕೆ ಸುರತ್ಕಲ್ ಮಾತ್ರವಲ್ಲ ಮಂಗಳೂರು ನಗರದ ಜನತೆ ಬೆಚ್ಚಿಬಿದ್ದಿದೆ. ಮೊದಲ ವರದಿಯಲ್ಲಿ 9 ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದ ಸಂದರ್ಭದಲ್ಲಿ ಸ್ಥಾವರ ಬಳಿ ಕರ್ತವ್ಯ ನಿರತರಾಗಿದ್ದ ನೌಕರರೊಬ್ಬರು ಮೃತಪಟ್ಟಿರುವುದು ಆಘಾತ ಉಂಟು ಮಾಡಿದೆ ಎಂದರು.
ಸ್ಪೋಟದ ನಿಖರ ಕಾರಣ ಪತ್ತೆ ಹಚ್ಚಿ ಸಮಗ್ರ ತನಿಖೆ ನಡೆಸಬೇಕು. ಮುಂದೆ ಇಂತಹ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇಂತಹ ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವ ನೌಕರ ವೃಂದಕ್ಕೆ ಸಂಸ್ಥೆಯು ಆರೋಗ್ಯ ಸುರಕ್ಷಾ ಸೌಲಭ್ಯ ತಕ್ಷಣ ಜಾರಿ ಮಾಡಬೇಕು. ಸ್ಪೋಟದಿಂದ ಸುತ್ತಮುತ್ತಲಿನ ಮನೆ, ಕಟ್ಟಡಗಳಿಗೆ ಹಾನಿಯಾಗಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ನೌಕರರ ಕುಟುಂಬಸ್ಥರಿಗೆ ಸಾಂತ್ವಾನ ನೀಡಿದರು.