

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಿಲ್ಲಿಸಿದ್ದ ಕಾರಿನಲ್ಲಿ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಣ್ಣೂರು ಜಿಲ್ಲೆಯ ಕಾಪ್ಪಾಡ್ ಕೆ.ಪಿ.ಫಾನಿಸ್ (35), ಪುತ್ತೂರು ತಾಲೂಕು ಆರ್ಲಪದವು ನಿವಾಸಿ ಮುಹ್ಮದ್ ಅನ್ಸಾದ್ (34) ಬಂಧಿತರು.
0.240 ಗ್ರಾಂ ಎಂಡಿಎಂಎ ಹಾಗೂ ಸಂಚಾರಕ್ಕೆ ಬಳಸಿದ್ದ ಕರ್ನಾಟಕ ನೋಂದಾಯಿತ ಕಾರು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ನೀಲೇಶ್ವರಂ ಠಾಣೆ ಪೊಲೀಸರು ಎಂಡಿಎಂಎ ಕೇಸ್ನಲ್ಲಿ ವಶಪಡಿಸಿಕೊಂಡಿದ್ದ ಕಾರೊಂದನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಅಲ್ಲಿದ್ದ ಕಾರೊಂದನ್ನು ಸಂಶಯಗೊಂಡು ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿತ್ತು. ಕಾಸರಗೋಡು ನಗರ ಠಾಣೆಯ ಅಧಿಕಾರಿ ಮೆಲ್ವಿನ್ ಜೋಸ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.
ಕಾಸರಗೋಡು: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಳಂಗರೆ ಎಂಬಲ್ಲಿ ಬೀಗ ಹಾಕಿದ್ದ ಬಾಡಿಗೆ ಮನೆಯೊಳಗೆ ದಾವಣಗೆರೆ ಮೂಲದ ನಜೀಮ್ ಎಂಬಾತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಜತೆಗಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಸಂಶಯಿಸಲಾಗಿದೆ. ನಜೀಮ್ ಮತ್ತು ಇತರ ಇಬ್ಬರು ತಿಂಗಳ ಹಿಂದೆಯಷ್ಟೇ ಖಾಸಗಿ ಕಟ್ಟಡದ ಮೇಲಿನ ಮಹಡಿಯಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಿದ್ದರು. ಗುರುವಾರ ಸಂಜೆ ಕೊಠಡಿಯ ಒಳಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕಾಸರಗೋಡು: ಬೈಕ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡಿರುವ ಪಯ್ಯನ್ನೂರು ಠಾಣೆ ಪೊಲೀಸರು ಮುಳ್ಳೇರಿಯ ಪಳ್ಳಂಗೋಡು ನಿವಾಸಿ ಎಂ.ಎ.ಮಹಮ್ಮದ್ ಶಬಾದ್(30) ಎಂಬಾತನನ್ನು ಬಂಧಿಸಿದ್ದಾರೆ. ಪಯ್ಯನ್ನೂರು ಠಾಣೆ ಎಸ್ಐ ಕೆ.ಸುಹೈಲ್ ಹಾಗೂ ತಂಡ ಶುಕ್ರವಾರ ತಡರಾತ್ರಿ 1.30ರ ವೇಳೆ ಕರಿವೆಳ್ಳೂರು ಪುದಿಯಂಗಾವ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ. 4.55 ಗ್ರಾಂ ಎಂಡಿಎಂಎ ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಪುದಿಯಂಗಾವ್ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಯ್ಯನ್ನೂರು ಕಡೆಯಿಂದ ಬಂದ ಬೈಕ್ ಪರಿಶೀಲಿಸಿದಾಗ ಆರೋಪಿ ಒಳಉಡುಪಿನೊಳಗೆ ಪ್ಲಾಸ್ಟಿಕ್ ಕವರ್ನಲ್ಲಿ ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಕಾಸರಗೋಡು: ಏರ್ ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲು ತಂದಿದ್ದ 9 ಕೋಟಿ ರೂ. ಮೌಲ್ಯದ 6.2 ಕಿಲೋ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್(ಡಿಆರ್ಐ)ವಶಪಡಿಸಿಕೊಂಡಿದೆ. ಕಾಸರಗೋಡು ಚಿನ್ನ ಕಳ್ಳಸಾಗಾಟ ಜಾಲಕ್ಕೆ ಸೇರಿದ ಕಣ್ಣೂರು ನಿವಾಸಿ ಅಮಲ್ರಾಜ್ ಎಂಬಾತನನ್ನು ಡಿಆರ್ಐ ಬಂಧಿಸಿದೆ.
ತಿರುವನಂತಪುರ ಶಂಕುಮುಖದಲ್ಲಿರುವ ಕೇರಳ ಸ್ಟೇಟ್ ಇಂಡಸ್ಟ್ರಿಯಲ್ ಎಂಟರ್ಪ್ರೈಸಸ್(ಕೆಎಸ್ಐಇ)ನ ನಿಯಂತ್ರಣದಲ್ಲಿರುವ ಏರ್ ಕಾರ್ಗೋ ಮೂಲಕ ಈ ಚಿನ್ನವನ್ನು ಕಾಸರಗೋಡಿಗೆ ಸಾಗಿಸುವ ಯೋಜನೆಯನ್ನು ಚಿನ್ನ ಕಳ್ಳಸಾಗಾಟ ದಂಧೆಕೋರರು ಹಾಕಿಕೊಂಡಿದ್ದರೆಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಯಾವುದೇ ಪ್ರಯಾಣಿಕರ ಹೆಸರನ್ನೂ ನಮೂದಿಸದೆ ಅನ್ಒಕ್ಯುಪೈಡ್ ಡಿಪ್ಲೊಮ್ಯಾಟಿಕ್ ಬ್ಯಾಗ್ನಲ್ಲಿ ಬಚ್ಚಿಟ್ಟು ಈ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದಿಳಿಸಲಾಗಿತ್ತು. ಬ್ಯಾಗಿನ ಒಳಗೆ ಹಾಗೂ ಡೋರ್ ಡೆಲಿವರಿ ರೂಪದಲ್ಲಿ ಒಟ್ಟು 6.2 ಕಿಲೋ ಚಿನ್ನವನ್ನು ಸಾಗಿಸಲು ಯತ್ನಿಸಲಾಗಿತ್ತು.