ಎಂಡಿಎಂಎ ವಶ, ಆರೋಪಿ ಬಂಧನ

ಬೇಕಲ ಠಾಣೆ ಪೊಲೀಸರ ತಂಡ ಕಾರ್ಯಾಚರಣೆ
crime
crime
Published on: 

ಕಾಸರಗೋಡು: ಮಾದಕ ಪದಾರ್ಥ ಎಂಡಿಎಂಎ ಮನೆಯಲ್ಲಿ ದಾಸ್ತಾನಿರಿಸಿದ್ದ ಆರೋಪದ ಮೇಲೆ ಕೋಟಪ್ಪಾರ ತಿರುವಕ್ಕೋಳಿ ಅಂಗಕಳರಿ ಹೌಸ್‌ನ ಕೆ.ಎಂ.ಅಬ್ದುಲ್ ನವಾಜ್(28) ಎಂಬಾತನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಕಲ ಠಾಣೆ ಎಸ್‌ಐ ಹಿಸಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಕೋಟಪ್ಪಾರ ಕಾನತ್ತಿಲ್ ಹೌಸ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಮನೆಯಲ್ಲಿದ್ದ 1.220 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ನವಾಜ್ ಕುಟುಂಬ ಫಾತಿಮಾ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಮಾದಕ ಪದಾರ್ಥ ದಂಧೆ ನಡೆಸುತ್ತಿತ್ತು ಎನ್ನಲಾಗಿದೆ.

ಫ್ಲಾಟ್ ಆವರಣಕ್ಕೆ ನುಗ್ಗಿ ಹಲ್ಲೆ

ಕಾಸರಗೋಡು: ಕುಂಬಳೆ ಸನಿಹದ ನಾರಾಯಣಮಂಗಲದ ಫ್ಲಾಟ್ ಆವರಣಕ್ಕೆ ನುಗ್ಗಿ ಹಲ್ಲೆ ನಡೆಸಿರುವ ಬಗ್ಗೆ ನಾರಾಯಣಮಂಗಲದ ಮಜೀದ್(38) ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣಮಂಗಲ ನಿವಾಸಿ ಅನ್ಸಾರ್(25) ಎಂಬುವರು ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ನ.9ರಂದು ಸಂಜೆ ಆರೋಪಿ ತನ್ನ ಫ್ಲಾೃಟ್‌ನ ಆವರಣದೊಳಗೆ ನುಗ್ಗಿ ಚಾಕುವಿನಿಂದ ಕೈಗೆ ಇರಿದಿದ್ದು, ತಡೆಯಲು ಬಂದ ಸಹೋದರ ಅಲ್ತಾಫ್(22) ಮತ್ತು ತಾಯಿ ಆಯಿಷಾ(40) ಅವರ ಮೇಲೂ ಹಲ್ಲೆ ನಡೆಸಿ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾಗಿ ಅನ್ಸಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಲಾಟರಿಗೆ ಅಂಗಡಿಗೆ ಕಾರು ಡಿಕ್ಕಿ

ಕಾಸರಗೋಡು: ಕಾಸರಗೋಡು-ಕಾಞಂಗಾಡು ಕೆಎಸ್‌ಟಿಪಿ ರಸ್ತೆಯ ಉದುಮದಲ್ಲಿ ನಿಯಂತ್ರಣ ತಪ್ಪಿದ ಕಾರು ಲಾಟರಿ ಮಾರಾಟದ ಅಂಗಡಿಗೆ ಡಿಕ್ಕಿಯಾದ ಪರಿಣಾಮ, ಲಾಟರಿ ಮಾರಾಟಗಾರ, ಕಳನಾಡು ಪುದಿಯ ವಳಪ್ ನಿವಾಸಿ ಚಂದ್ರ (67)ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಬೆಳಗ್ಗೆ ಕಳನಾಡು ಓವರ್ ಬ್ರಿಡ್ಜ್ ಸಮೀಪ ಅಪಘಾತ ಸಂಭವಿಸಿದೆ. ರಸ್ತೆ ಅಡ್ಡ ದಾಟುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಕಾರು ಲಾಟರಿ ಅಂಗಡಿಗೆ ಡಿಕ್ಕಿಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮನೆಯಲ್ಲಿ 15.75 ಪವನ್ ಚಿನ್ನ ಕಳವು

ಕಾಸರಗೋಡು: ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣತ್ತೂರು ಚಿರಂಕಡವು ಮಸೀದಿ ಸಮೀಪದ ನಿವಾಸಿ ಆಯಿಷತ್ ಹಸ್ಸಾ ಎಂಬುವರ ಮನೆಯಲ್ಲಿ 15.75 ಪವನ್ ಚಿನ್ನಾಭರಣ ಕಳವಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಸತಿ ಶಾಲೆ ಪ್ರಬಂಧಕ ಅಮಾನತು

ಕಾಸರಗೋಡು: ಪ್ರೀ ಮೆಟ್ರಿಕ್ ಹಾಸ್ಟೆಲ್ ಮತ್ತು ಟ್ರೈಬಲ್ ಎಕ್ಸ್‌ಟೆನ್ಶನ್ ಕಚೇರಿಯಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿ ಮಾಜಿ ಬುಡಕಟ್ಟು ವಿಸ್ತರಣಾಧಿಕಾರಿ, ಕುಂಡಂಗುಳಿ ಸಾವಿತ್ರಿ ಬಾಯಿ ಫುಲೆ ಸ್ಮಾರಕ ವಸತಿ ಶಾಲೆಯ ಪ್ರಬಂಧಕ ಪ್ರಶಾಂತ್ ಕುಮಾರ್ ಕಟ್ಟಪ್ಪನ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ.ಬಿನು ಫ್ರಾನ್ಸಿಸ್ ನಿರ್ದೇಶನುಸಾರ ಅಮಾನತು ನಡೆಸಲಾಗಿದೆ. ‘ಸಪ್ಲೈಕೋ’ ಕೇಂದ್ರದಿಂದ ಸಾಮಗ್ರಿ ಖರೀದಿ, ಆಟೋರಿಕ್ಷಾ ಬಾಡಿಗೆ ಮೊತ್ತ ದಾಖಲು, ಕೊಟೇಶನ್ ಇಲ್ಲದೆ ಸಮವಸ್ತ್ರಕ್ಕಾಗಿ ಗುತ್ತಿಗೆ ನೀಡಿರುವುದು, ಹೆಚ್ಚಿನ ಮೊತ್ತದ ಯಾತ್ರಾ ವೆಚ್ಚ ದಾಖಲು ಇತ್ಯಾದಿ ಅವ್ಯವಹಾರ ಪತ್ತೆಹಚ್ಚಲಾಗಿತ್ತು. ಪರಿಶಿಷ್ಟ ಅಭಿವೃದ್ಧಿ ಇಲಾಖೆಯ ಹಿರಿಯ ಆಡಳಿತ ಅಧಿಕಾರಿ ತನಿಖೆ ನಡೆಸಿ ಸಲ್ಲಿಸಿದ ವರದಿಯ ಆಧಾರದಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.