

ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026 ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.11ರಿಂದ 22ರವರೆಗೆ ಜರುಗಲಿದೆ ಎಂದು ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಹೇಳಿದರು.
ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದ್ದು, ಭಕ್ತಿಸಾಗರಕ್ಕೆ ಸಕಲ ಸಿದ್ಧತೆ ನಡೆದಿವೆ. ಕ್ಷೇತ್ರದ ಭವ್ಯ ದರ್ಬಾರ್ ಹಾಲ್‌ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ, ಭಕ್ತಿಪೂರ್ಣ ಭಜನೆ, ನೃತ್ಯ-ಸಂಗೀತ ವೈಭವ, ಕ್ರೀಡಾಕೂಟಗಳು ಮತ್ತು ಸಮೃದ್ಧ ಜಾನಪದ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ಅ.11ರಂದು ವೈದಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12ಕ್ಕೆ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. 12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ರಾಜ್ಯದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅ.21ರಂದು ಸಂಜೆ 4ಕ್ಕೆ ಮಂಗಳೂರು ದಸರಾ ಮಹೋತ್ಸವದ ಐತಿಹಾಸಿಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. ಅ.12ರಿಂದ 20ರವರೆಗೆ ಪ್ರತಿದಿನವೂ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನೆರವೇರಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಜರುಗಲಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೆ ಚಂಡಿಕಾಹೋಮ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಟ್ರಸ್ಟಿ ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಚಿತ್ತರಂಜನ್ ಗರೋಡಿ, ಹರಿಕೃಷ್ಣ ಬಂಟ್ವಾಳ್, ಚಂದನ್‌ದಾಸ್, ರಾಧಾಕೃಷ್ಣ, ಲೀಲಾಕ್ಷ ಕರ್ಕೇರ, ಜತಿನ್ ಅತ್ತಾವರ, ವಾಸುದೇವ ಕೋಟ್ಯಾನ್, ಲತೀಶ್ ಸುವರ್ಣ, ಪ್ರವೀಣ್ ದಂಡೆಕೇರಿ ಮತ್ತಿತರರಿದ್ದರು.
ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ನಿತ್ಯ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಲಾಝೇಂಕಾರ. ಇದೇ ವೇದಿಕೆಯಲ್ಲಿ ಪ್ರತಿದಿನವೂ ಸಮಾಜದ ಸಾಧಕ ಮಹಿಳೆಯರಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು. 12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕತೆ ಹಾಗೂ ಕವನ ಸ್ಪರ್ಧೆ, 13ರಂದು ಸಂಜೆ 7.30ರಿಂದ ರುದ್ರತಾಂಡವಂ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ನಡೆಯಲಿದೆ. 15ರಂದು ಮಕ್ಕಳಿಗಾಗಿ ಮಕ್ಕಳ ದಸರಾ ಜರುಗಲಿದ್ದು, ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ದೇಶಭಕ್ತಿಗೀತೆ ಸ್ಪರ್ಧೆ ನಡೆಯಲಿವೆ. ಅ.16ರಂದು ಮುದ್ದು ಶಾರದೆ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4, ಕಿನ್ನಿಪಿಲಿ ಸೀಸನ್-2 ಜರುಗಲಿವೆ. 19ರಂದು ಮಹಿಳೆಯರಿಗಾಗಿಯೇ ಮಹಿಳಾ ದಸರಾ ನಡೆಯಲಿದ್ದು, ಭರತನಾಟ್ಯ ಸ್ಪರ್ಧೆ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ, ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8ಕ್ಕೆ ಮಹಿಳೆಯರಿಂದ ಸಮೂಹ ಗರ್ಭಾ ದಾಂಡಿಯಾ ನೃತ್ಯ ನಡೆಯಲಿದೆ. 20ರಂದು ದಸರಾ ರಂಗಾಂತರಂಗ ಸಾಂಸ್ಕೃತಿಕ ವೈವಿಧ್ಯಮಯ ಸ್ಪರ್ಧೆಗಳು ಜರುಗಲಿವೆ ಎಂದು ಪದ್ಮರಾಜ್ ಆರ್.ಪೂಜಾರಿ ಮಾಹಿತಿ ನೀಡಿದರು.
ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಈ ಬಾರಿ ಅರಮನೆ ಶೈಲಿಯಲ್ಲಿ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ.ಅ.20ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.
ಪದ್ಮರಾಜ್ ಆರ್. ಪೂಜಾರಿ, ಕ್ಷೇತ್ರದ ಕೋಶಾಧಿಕಾರಿ