ಕೆಡಿಇಎಂ-ಎಫ್‌ಕೆಸಿಸಿಐ ಒಡಂಬಡಿಕೆಗೆ ಸಹಿ

ಕೆಡಿಇಎಂ-ಎಫ್‌ಕೆಸಿಸಿಐ ಸಂಸ್ಥೆಗಳು  ಒಡಂಬಡಿಕೆಗೆ ಸಹಿ ಹಾಕಲಾಯಿತು.
ಕೆಡಿಇಎಂ-ಎಫ್‌ಕೆಸಿಸಿಐ ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಲಾಯಿತು.
Published on
ಮಂಗಳೂರು : ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ (ಎಫ್‌ಕೆಸಿಸಿಐ) ಸಂಸ್ಥೆಗಳು ಜಿಲ್ಲಾ ಮಟ್ಟದ ಮತ್ತು ಕ್ಲಸ್ಟರ್ ಮಟ್ಟದ ಅಭಿವೃದ್ಧಿಯ ಮೇಲೆ ಒತ್ತು ನೀಡಿ ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದಿಂದ ಬುಧವಾರ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಾಯಿತು.
ಈ ಸಹಯೋಗದ ಮೂಲಕ ಎಫ್‌ಕೆಸಿಸಿಐಯ 30ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳ ಜಾಲ ಮತ್ತು ಕೆಡಿಇಎಂಯ ಕ್ಲಸ್ಟರ್ ಆಧರಿತ ವ್ಯವಸ್ಥೆಯನ್ನು ಬಳಸಿಕೊಂಡು ಮಹಾನಗರಗಳಲ್ಲದ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಡಿಜಿಟಲೀಕರಣ, ಸ್ಟಾರ್ಟಪ್ ಬೆಳವಣಿಗೆ, ಹೂಡಿಕೆ ಸಿದ್ಧತೆ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಾಗುತ್ತದೆ. ಸಣ್ಣ ಉದ್ಯಮಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮುಂದುವರಿಯಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಡಿಇಎಂನ ಸಿಇಓ ಸಂಜೀವ್ ಕುಮಾರ್ ಗುಪ್ತಾ ಅವರು, ಕರ್ನಾಟಕದ ಡಿಜಿಟಲ್ ಬೆಳವಣಿಗೆಯು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತವಾಗದೆ ರಾಜ್ಯ ಮಟ್ಟದಲ್ಲಿ ಬೆಳವಣಿಗೆ ಹೊಂದಬೇಕು. ಎಫ್‌ಕೆಸಿಸಿಐ ಜೊತೆಗಿನ ಈ ಪಾಲುದಾರಿಕೆಯು ನೀತಿ, ವ್ಯವಸ್ಥೆ ಅಭಿವೃದ್ಧಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಜೋಡಿಸಿ ಈ ಉದ್ದೇಶ ಸಾಧನೆಗೆ ನಮಗೆ ಸಹಾಯ ಮಾಡಲಿದೆ. ಜಿಲ್ಲೆಗಳಲ್ಲಿ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹೂಡಿಕೆಗಳನ್ನು ಸಾಧ್ಯವಾಗಿಸುವುದು, ಉದ್ಯಮಶೀಲತೆಯನ್ನು ವೇಗಗೊಳಿಸುವುದು ಮತ್ತು ತಂತ್ರಜ್ಞಾನ ಆಧರಿತ ಬೆಳವಣಿಗೆ ಉಂಟಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಎಫ್‌ಕೆಸಿಸಿಐಯ ಅಧ್ಯಕ್ಷ ಉಮಾ ರೆಡ್ಡಿ ಮಾತನಾಡಿ, ಈ ಒಡಂಬಡಿಕೆಯು ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉದ್ಯಮಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ. ನಮ್ಮ ಜಿಲ್ಲಾ ಚೇಂಬರ್‌ಗಳು ಮತ್ತು ಸದಸ್ಯ ಜಾಲದ ಮೂಲಕ ಕೆಡಿಇಎಂನೊಂದಿಗೆ ಕೆಲಸ ಮಾಡಿ ಉದ್ಯಮಗಳು, ಸ್ಟಾರ್ಟಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ಹೂಡಿಕೆ, ಕೌಶಲ್ಯ ಮತ್ತು ಹೊಸ ಆವಿಷ್ಕಾರ ಅವಕಾಶಗಳನ್ನು ಹೊಂದುವ ಸಂಪರ್ಕ ಒದಗಿಸುತ್ತೇವೆ ಎಂದರು.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಮಾತನಾಡಿ, ರಾಜ್ಯಾದ್ಯಂತ ಸಮತೋಲಿತ ಡಿಜಿಟಲ್ ಬೆಳವಣಿಗೆಯನ್ನು ಆಗುಗೊಳಿಸುವ ಕರ್ನಾಟಕ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿ ಈ ಸಹಭಾಗಿತ್ವ ಮೂಡಿಬಂದಿದೆ. ಜಿಲ್ಲಾ ಮಟ್ಟದ ವ್ಯವಸ್ಥೆಗಳನ್ನು ಬಲಪಡಿಸಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಬೆಂಗಳೂರಿನಾಚೆಗೆ ಒಳಗೊಳ್ಳುವಿಕೆ, ಉದ್ಯೋಗ ಸೃಷ್ಟಿ ಮತ್ತು ನಿರಂತರ ಆರ್ಥಿಕ ಅಭಿವೃದ್ಧಿಗೆ ಅಡಿಗಲ್ಲು ಹಾಕುತ್ತಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net