ಸಿಡಿಲಾಘಾತಕ್ಕೆ ಯುವಕ ಮೃತ್ಯು

ಆದೂರು ಪೊಲೀಸ್ ಠಾಣಾ ವ್ಯಾಪ್ತಿ
crime news
crime news
Published on: 

ಕಾಸರಗೋಡು: ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡಿ ಬಳುವಂತಡ್ಕದಲ್ಲಿ ಸಿಡಿಲಿನ ಆಘಾತದಿಂದ ಕುಂಟಾರು ಬಳಿಯ ಊಯಿತ್ತಡ್ಕ ನಿವಾಸಿ ಅರಬಿ ಎಂಬುವರ ಪುತ್ರ ನೌಫಲ್(30) ಮೃತಪಟ್ಟಿದ್ದಾರೆ. ಪಾಂಡಿ ಬಳುವಂತಡ್ಕದ ಸಂಬಂಧಿಕರ ಮನೆಗೆ ತೆರಳಿದ್ದ ನೌಫಲ್ ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದ ವೇಳೆ ಸಿಡಿಲು ಬಡಿದಿದೆ. ನೌಫಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ತಿರುವನಂತಪುರದ ಜೂಸ್ ಅಂಗಡಿಯೊಂದರಲ್ಲಿ ಕೆಲಸಕ್ಕಿರುವ ನೌಫಲ್ ರಜೆಯಲ್ಲಿ ಊರಿಗೆ ಬಂದಿದ್ದರು.

ನ್ಯುಮೋನಿಯಾ ಬಾಧಿಸಿ ಬಾಲಕಿ ಸಾವು

ಕಾಸರಗೋಡು: ನ್ಯುಮೋನಿಯಾ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಂಜೇಶ್ವರ ದೇರಂಗಡಿಪಳ್ಳದ ವೀಕ್ಷಾ(3) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಮಂಜೇಶ್ವರ ಎಸ್‌ವಿಟಿ ಶಾಲೆ ಎಲ್‌ಕೆಜಿ ವಿದ್ಯಾರ್ಥಿನಿಯಾಗಿದ್ದ ಆಕೆಗೆ ಜ್ವರ ಬಾಧಿಸಿದ್ದು, ತಪಾಸಣೆ ವೇಳೆ ನ್ಯುಮೋನಿಯಾ ಪತ್ತೆಯಾಗಿತ್ತು. ಕಳೆದ 3 ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಲಾಗಿದ್ದು, ಸಂಘ ಸಂಸ್ಥೆ, ಶಾಲೆ ವತಿಯಿಂದ ಹಣ ಸಂಗ್ರಹಿಸಿ ನೀಡಲಾಗಿತ್ತು.

ಮನೆಯಿಂದ ಹೋದ ಯುವತಿ ನಾಪತ್ತೆ

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರು ಬಿ.ಎಸ್.ನಗರ ನಿವಾಸಿ, ಬಫನ್‌ಕುಂಞಿ ಎಂಬುವರ ಪುತ್ರಿ ಫಾತಿಮತ್ ಅಫ್ರೀನಾ(24) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದವಳು ರಾತ್ರಿಯಾದರೂ ಮನೆಗೆ ವಾಪಸಾಗದಿರುವ ಬಗ್ಗೆ ಯುವತಿ ತಾಯಿ ನೀಡಿದ ದೂರು ನೀಡಿದ್ದಾರೆ.

ಶೆಡ್‌ನಲ್ಲಿಟ್ಟಿದ್ದ ಅಡಿಕೆ ಕಳವು

ಕಾಸರಗೋಡು: ಮನೆ ಸಮೀಪದ ಕಾರಿನ ಶೆಡ್ಡಿನಲ್ಲಿ ಸಂಗ್ರಹಿಸಿಟ್ಟಿದ್ದ ಎರಡು ಚೀಲ ಅಡಿಕೆ ಕಳವಾಗಿರುವ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರಡಾಲ ನಾಲ್ವಾಡ್ ಹೌಸ್ ನಿವಾಸಿ ಅಬ್ದುಲ್ ಇರ್ಷಾದ್ ಎಂಬುವರಿಗೆ ಸೇರಿದ 30 ಸಾವಿರ ರೂ. ಮೌಲ್ಯದ ಎರಡು ಚೀಲ ಗೋಟು ಅಡಿಕೆ ಕಳವಾಗಿದೆ.

ಚಿನ್ನಾಭರಣ ಕಳವು ಆರೋಪಿಗಳಿಬ್ಬರ ಸೆರೆ

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಾರು ವೆಳ್ಳಕಡವು ನಿವಾಸಿ ಸದಾನಂದ ಎಂಬವರ ಮನೆ ಬಾಗಿಲು ಒಡೆದು ಹಾಡಹಗಲೇ ಏಳೂವರೆ ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಳಂ ಎಳಕೋಲ್ ನಿವಾಸಿ ಅಭಿರಾಜ್(33) ಹಾಗೂ ಕೊಲ್ಲಂ ಪತ್ತನಾಪುರಂ ನಿವಾಸಿ ಆದಿತ್ಯನ್ (36) ಬಂಧಿತರು. ಮನೆಯವರು ಕೆಲಸಕ್ಕೆ ತೆರಳಿದ್ದ ವೇಳೆ ಅಡುಗೆಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ್ದರು.

ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ತೆರಳಿರುವ ಬಗ್ಗೆ ಸ್ಥಳೀಯರೊಬ್ಬರು ನೀಡಿದ ವಾಹಿತಿಯನ್ವಯ ಟನಾ ಸ್ಥಳದಿಂದ ಮೂರು ಕಿ.ಮೀ ಆಚೆಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅತ್ಯಾಚಾರ, ಮಗುವಿಗೆ ಜನ್ಮನೀಡಿದ ಯುವತಿ

ಕಾಸರಗೋಡು: ಅತ್ಯಾಚಾರಕ್ಕೊಳಗಾದ 21ರ ಹರೆಯದ ಯುವತಿ ಮಗುವಿಗೆ ಜನ್ಮ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣಾ ವ್ಯಾಪ್ತಿಯ ಚಂದ್ರು(40) ಎಂಬಾತನ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಠಾಣಾ ವ್ಯಾಪ್ತಿಯ 21ರ ಯುವತಿಗೆ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗಿದ್ದು, ಆಸ್ಪತ್ರೆ ಅಧಿಕಾರಿಗಳು ನೀಡಿದ ವಾಹಿತಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲಿ ಪಾಷಾಣ ಸೇವಿಸಿದ್ದಾತ ಸಾವು

ಕಾಸರಗೋಡು: ಇಲಿ ಪಾಷಾಣ ಸೇವಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಸರಗೋಡು ಕೂಡ್ಲು ಮನ್ನಿಪ್ಪಾಡಿ ಸಮೀಪದ ಕಾಂತಿಕೆರೆ ನಿವಾಸಿ ಶಶಿಧರ (39) ಬುಧವಾರ ಮೃತಪಟ್ಟಿದ್ದಾರೆ. ಇಲಿ ವಿಷ ಸೇವಿಸಿದ್ದ ಶಶಿಧರ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಂಞಿರಾಮ ಮಣಿಯಾಣೆ-ಶಂಕರಿ ದಂಪತಿ ಪುತ್ರನಾದ ಇವರು ಕಟ್ಟಡ ನಿರ್ವಾಣ ಕಾರ್ಮಿಕರಾಗಿದ್ದು, ಅವಿವಾಹಿತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net