

ಪುರುಷೋತ್ತಮ ಪೆರ್ಲ ಕಾಸರಗೋಡು
‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಕಾಸರಗೋಡಿನ ಕನ್ನಡಿಗರಿಗೆ ಆದ ಅನ್ಯಾಯದ ವಿರುದ್ಧ ಸೆಟೆದು ನಿಂತು ತಮ್ಮ ಜೀವಮಾನವಿಡೀ ಕನ್ನಡ ಭಾಷೆ-ಸಂಸ್ಕೃತಿಗಾಗಿ ಹೋರಾಟ ನಡೆಸಿದ್ದ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯರ ಕಿಂಞಣ್ಣ ರೈ ಅವರ ಸ್ಮರಣಾರ್ಥ ಹುಟ್ಟೂರು ಪೆರಡಾಲ ಕವಿತಾ ಕುಟೀರ ಸಮೀಪದಲ್ಲಿ ನಿರ್ಮಾಣಗೊಂಡಿರುವ ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಕನ್ನಡ ಸಂಸ್ಕೃತಿ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ.
ಕಿಂಞಣ್ಣ ರೈ ಅವರ ಮನೆಯವರು ಕವಿತಾ ಕುಟೀರ ಸಮೀಪದ ಕಲ್ಲಕಳಯ ಬತ್ತೇರಿ ಎಂಬಲ್ಲಿ ಉದಾರವಾಗಿ ನೀಡಿರುವ 31 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಾಣಗೊಂಡಿದ್ದು, ನ.30ರಂದು ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕದ ಸಚಿವರು, ಕೇರಳದ ಸಂಸದರು, ಅಧಿಕಾರಿಗಳು ಸೇರಿದಂತೆ ಸಾಂಸ್ಕೃತಿಕ, ಸಾಹಿತ್ಯಿಕ ವಲಯದ ದಿಗ್ಗಜರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 2 ಕೋಟಿ ರೂ. ಅನುದಾನದೊಂದಿಗೆ ಪ್ರಾಧಿಕಾರದ ಉಸ್ತುವಾರಿಯಲ್ಲಿ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ಣಗೊಳಿಸಿದೆ. ಕವಿತಾ ಕುಟೀರ ಕಟ್ಟಡ ನಿರ್ಮಾಣ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಮಹತ್ತರ ಯೋಜನೆಯೊಂದು ಜಾರಿಯಾಗುತ್ತಿದೆ.
ಸಂಸ್ಕೃತಿ ಭವನವು ಸುಸಜ್ಜಿತ ವೇದಿಕೆ, ಎರಡು ಕೊಠಡಿ, ಕಚೇರಿ, ತಳಭಾಗದಲ್ಲಿ ಸಭಾಂಗಣ ಹಾಗೂ ಮೇಲ್ಮಹಡಿಯಲ್ಲಿ ಅರ್ಧ ಭಾಗ ಬಾಲ್ಕನಿ ಒಳಗೊಂಡಿದೆ.
ಕಲ್ಲಕಳಯದ ಎತ್ತರದ ಪ್ರದೇಶದಲ್ಲಿ ಭವನ ತಲೆಯೆತ್ತಿದ್ದು ಬೆಳಿಂಜ ರಸ್ತೆಯಿಂದ ಭವನಕ್ಕೆ ಸಾಗುವ ಸುಮಾರು ಒಂದೂವರೆ ಫರ್ಲಾಂಗು ರಸ್ತೆ ಸಂಪೂರ್ಣ ಕಾಡಿನಿಂದ ಆವೃತವಾಗಿದ್ದು ಸಂಚಾರ ದುಸ್ತರವೆನಿಸಿದೆ. ಸಂಸ್ಕೃತಿ ಭವನಕ್ಕೆ ತೆರಳುವ ಕಚ್ಚಾ ರಸ್ತೆಯನ್ನು ಸರ್ವಋತು ಸಂಚಾರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ರಸ್ತೆ ಬದಿಯಲ್ಲಿ ನಾಮಫಲಕವನ್ನೂ ಅಳವಡಿಸಬೇಕಾಗಿದೆ. ಇನ್ನೂ ಕೆಲವು ಕಾಮಗಾರಿ ಬಾಕಿಯಿದ್ದು ಆವರಣಗೋಡೆ, ಅತಿಥಿಗೃಹ, ಬೆಳಕಿನ ವ್ಯವಸ್ಥೆ ಸೇರಿದಂತೆ ಕೆಲಸಗಳು ನಡೆಯಬೇಕಾಗಿದೆ. ಬಾಕಿಯುಳಿದ ಕಾಮಗಾರಿಗಳ ಅನುದಾನಕ್ಕಾಗಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು, ಮಂಜೇಶ್ವರದ ಶಾಸಕರು ಹಾಗೂ ಕೇರಳದ ಸಚಿವರ ಮನವೊಲಿಸುವ ಕೆಲಸವೂ ನಿರಂತರವಾಗಿ ನಡೆದುಬರುತ್ತಿದೆ.