ಉಜಿರೆ ಸಂಪಿಗೆ ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ರಾಶಿ

ಪರಿಸರ ಮಾಲಿನ್ಯ ಜತೆಗೆ ಸಾಂಕ್ರಾಮಿಕ ರೋಗ ಭೀತಿ
ಉಜಿರೆ ಸಂಪಿಗೆ ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ರಾಶಿ ಬಿದ್ದಿರುವುದು
ಉಜಿರೆ ಸಂಪಿಗೆ ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ರಾಶಿ ಬಿದ್ದಿರುವುದು
Published on: 

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಉಜಿರೆಯ ಸಂಪಿಗೆ ನಗರದ ರಸ್ತೆ ಬದಿ ಹಾಗೂ ಅಲ್ಲಲ್ಲಿ ಕಂಡುಬರುತ್ತಿರುವ ತ್ಯಾಜ್ಯ ರಾಶಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಹೆದ್ದಾರಿ ಬದಿಯಿಂದ ಅಣತಿ ದೂರದಲ್ಲಿರುವ ಈ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಜನವಸತಿ ಪ್ರದೇಶದ ಸಮೀಪವೇ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯದ ಜತೆಗೆ ಆರೋಗ್ಯದ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಪೌಂಡ್ ಬದಿವರೆಗೂ ಕಸ

ಕೆಲವು ಕಡೆಗಳಲ್ಲಿ ಮನೆಗಳ ಕಾಂಪೌಂಡ್‌ಗಳ ತನಕವೂ ಕಸವನ್ನು ತಂದು ಸುರಿಯಲಾಗುತ್ತಿದೆ. ಹಳಸಿದ ಆಹಾರ ತ್ಯಾಜ್ಯ, ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಪರಿಸರದಲ್ಲಿ ದುರ್ವಾಸನೆ ಬೀರುವುದರ ಜತೆಗೆ ಸೊಳ್ಳೆ, ನೊಣ ಹಾಗೂ ಇತರ ಕೀಟಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಮಳೆ ಬಂದಾಗ ತ್ಯಾಜ್ಯದ ಕೊಳಚೆ ನೀರು ಸುತ್ತಮುತ್ತ ಹರಿದು ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನವಸತಿ ಪ್ರದೇಶದ ಎಲ್ಲೆಡೆ ತ್ಯಾಜ್ಯ ಎಸೆಯುತ್ತಿರುವುದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಸ್ಥಳೀಯರೇ? ಹೊರಗಿನವರೇ?

ಇಲ್ಲಿ ಕಸ ತಂದು ಸುರಿಯುತ್ತಿರುವವರು ಯಾರು ಎಂಬುದು ಪತ್ತೆಯಾಗಿಲ್ಲ. ಸ್ಥಳೀಯರೇ ಕಸ ಎಸೆಯುತ್ತಿದ್ದಾರೆಯೇ ಅಥವಾ ಹೊರ ಪ್ರದೇಶಗಳಿಂದ ವಾಹನಗಳಲ್ಲಿ ತಂದು ಇಲ್ಲಿ ಸುರಿಯಲಾಗುತ್ತಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿದೆ. ರಾತ್ರಿ ಅಥವಾ ಸಾರ್ವಜನಿಕರ ಗಮನಕ್ಕೆ ಬಾರದ ಸಮಯದಲ್ಲಿ ವಾಹನಗಳಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಅಂಥವರನ್ನು ಶೀಘ್ರವೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆಗೆ ಆಗ್ರಹ

ರಸ್ತೆ ಬದಿ ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಲು ಸಂಪಿಗೆ ನಗರ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ನಿಗಾ ಇಡಬೇಕು. ಕಸ ಸುರಿಯುವವರನ್ನು ಗುರುತಿಸಿ ನಿಯಮಾನುಸಾರ ದಂಡ ವಿಧಿಸುವುದರ ಜತೆಗೆ, ಸಂಗ್ರಹವಾಗಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net