

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಒಟ್ಟು 1,450.340 ಲೀಟರ್ ಮದ್ಯವನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ 20,37,340 ರೂ. ಆಗಿರುತ್ತದೆ.
ಬಾಳ್ತಿಲದಲ್ಲಿ 7.72 ಲಕ್ಷ ರೂ.ಮೌಲ್ಯದ ಮದ್ಯ ಜಪ್ತಿ
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿ ಎಂಬಲ್ಲಿ ಅಮಿತ್ ಬಿನ್ ಅಣ್ಣು ಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬ ವ್ಯಕ್ತಿಯು ಸೇರಿಕೊಂಡು ಗೋವಾ ರಾಜ್ಯದಲ್ಲಿ ತಯಾರಿಸಲಾದ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ದಾಳಿಯ ಸಂದರ್ಭದಲ್ಲಿ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮಾಲ್ಟ್ ವಿಸ್ಕಿಯ 146 ಪೆಟ್ಟಿಗೆಗಳಲ್ಲಿ ಒಟ್ಟು 1,261.440 ಲೀಟರ್ ಗೋವಾ ಮದ್ಯ ಪತ್ತೆಯಾಗಿದ್ದು, ಅಂದಾಜು 7,72,340 ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಕಲ್ಲಡ್ಕದಲ್ಲಿ 188.9 ಲೀಟರ್ ಮದ್ಯ ಅಕ್ರಮ ಸಾಗಾಟ ಪತ್ತೆ
ಬಂಟ್ವಾಳ ತಾಲೂಕಿನ ಮೆಲ್ಕಾರ್ ಪ್ರದೇಶದ ಕಲ್ಲಡ್ಕದ ಸಮೀಪ ಕೇರಳ ರಾಜ್ಯದ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಗೋವಾ ರಾಜ್ಯದ ಮದ್ಯವನ್ನು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು.
ಈ ಮಾಹಿತಿಯ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರಿಶೀಲಿಸಿದಾಗ, ಕೇರಳ ರಾಜ್ಯದ ನೋಂದಣಿ ಹೊಂದಿರುವ ಬಿಳಿ ಮತ್ತು ಕಪ್ಪು ಬಣ್ಣದ ಹುಂಡೈ 20 ಕಾರು ಹಾಗೂ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳಲ್ಲಿ ಆರೋಪಿಗಳಾದ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಇವರುಗಳು 24 ಪೆಟ್ಟಿಗೆಗಳಲ್ಲಿ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮದ್ಯವನ್ನು, ಒಟ್ಟು 188.9 ಲೀಟರ್ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಮದ್ಯದೊಂದಿಗೆ ಸಾಗಾಟಕ್ಕೆ ಬಳಸಿದ ಎರಡೂ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ 12,65,000ರೂ. ಆಗಿರುತ್ತದೆ.
ಈ ಹಿಂದೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ರಚಿಸಲಾದ ಇದೇ ಅಬಕಾರಿ ತಂಡವು ಹೆಜಮಾಡಿ ಟೋಲ್ ಬಳಿ ಗೋವಾ ರಾಜ್ಯದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
ಅಬಕಾರಿ ಜಂಟಿ ಆಯುಕ್ತ ಸಿ.ಜಗದೀಶ್ ಇವರ ನಿರ್ದೇಶನದ ಮೇರೆಗೆ ಹಾಗೂ ಉಪ ಆಯುಕ್ತೆ ಬಿಂದುಶ್ರೀ ಪಿ. ಮಾರ್ಗದರ್ಶನದಲ್ಲಿ, ಅಬಕಾರಿ ಬಂಟ್ವಾಳ ವಿಭಾಗ ಉಪ ಅಧೀಕ್ಷಕ ಸಂತೋಷ್ ಮೊಡಗಿ, ಮಂಗಳೂರು ವಿಭಾಗದ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್., ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ನೇತೃತ್ವದಲ್ಲಿ ಅಬಕಾರಿ ಉಪನಿರೀಕ್ಷಕ ಅಭಿಷೇಕ್ ಬೋರಕರ ಹಾಗೂ ವಿಶಾಲ್ ನಾಯಕ್, ಅಬಕಾರಿ ಕಾನ್ಸ್ಟೇಬಲ್ಗಳಾದ ಪ್ರಕಾಶ್ ಮತ್ತು ದೊಡ್ಡಪ್ಪ ಹಾಗೂ ವಾಹನ ಚಾಲಕ ಧೀರಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ತಂದು ದಾಸ್ತಾನು ಮಾಡುವುದು ಹಾಗೂ ಇತರ ರಾಜ್ಯಗಳಿಗೆ ಸಾಗಾಟ ಮಾಡುವ ಅಕ್ರಮ ಚಟುವಟಿಕೆಗಳ ವಿರುದ್ಧ ದಕ್ಷಿಣ ಕನ್ನಡ ಅಬಕಾರಿ ಇಲಾಖೆ ನಿರಂತರ ನಿಗಾ ವಹಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ತಿಳಿಸಿದೆ.