

ಗಂಗಾಧರ ಕಲ್ಲಪಳ್ಳಿ
ಸುಳ್ಯ ನಗರಕ್ಕೆ ಹಲವು ವರ್ಷಗಳಿಂದ ದೊಡ್ಡ ತಲೆನೋವಾಗಿ ಕಾಡುತ್ತಿದ್ದ ಒಣ ಕಸ ನಿರ್ವಹಣೆ ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ. ಸುಳ್ಯ ನಗರ ಪಂಚಾಯಿತಿಯ ಆವರಣದಲ್ಲಿ ತುಂಬಿ ತುಳುಕುತ್ತಿದ್ದ ಒಣ ಕಸ ನಗರದ ಅಂದವನ್ನೇ ಕೆಡಿಸಿತ್ತು. ಕಲ್ಚರ್ಪೆ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯಾರಂಭ ಮಾಡಿದ್ದು ಕಸ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯಗಳನ್ನೆಲ್ಲ ಸಂಗ್ರಹಿಸಿ ಒಣಕಸ, ಹಸಿ ಕಸ ಎಂದು ವಿಂಗಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರ ಮಾಡಲು ಖಾಸಗಿಯವರಿಗೆ ನೀಡಲಾಗುತ್ತದೆ. ಒಣ ಕಸವನ್ನು ಗೋಣಿ ಚೀಲದಲ್ಲಿ ತುಂಬಿಡಲಾಗುತ್ತದೆ. ಹೀಗೆ ಚೀಲದಲ್ಲಿ ತುಂಬಿಸಿಟ್ಟ ಒಣ ಕಸ ನಗರ ಪಂಚಾಯಿತಿ ಆವರಣದ ಎಲ್ಲೆಡೆ ರಾರಾಜಿಸುತ್ತಿತ್ತು. ಇದೀಗ ಈ ಒಣ ಕಸವನ್ನು ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಕಸ ವಿಂಗಡಣೆ ಘಟಕಕ್ಕೆ ಸಾಗಿಸಲಾಗಿದೆ. ಅಲ್ಲಿ ಕಸವನ್ನು ಮಷಿನ್ ಮೂಲಕ ಬೇರ್ಪಡಿಸಿ, ಬೇಲಿಂಗ್ ಮಷಿನ್ ಮೂಲಕ ಪ್ರತ್ಯೇಕ ಕಟ್ಟುಗಳನ್ನಾಗಿ ಮಾಡಲಾಗುತ್ತದೆ. ಈ ಪ್ಲಾಸ್ಟಿಕ್ ಕಟ್ಟುಗಳನ್ನು ಮರುಬಳಕೆ ಮಾಡುವ ಕಾರ್ಖಾನೆಗಳಿಗೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರ (ಎಂಆರ್‌ಎಫ್) ನಿರ್ಮಿಸಲಾಗಿದೆ. 32 ಲಕ್ಷ ರೂ. ವೆಚ್ಚದ ಈ ಕೇಂದ್ರದ ಕಟ್ಟಡದಲ್ಲಿ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಯಂತ್ರ ಅಳವಡಿಸಲಾಗಿದೆ. 9 ಲಕ್ಷ ರೂ. ವೆಚ್ಚದಲ್ಲಿ ಒಣ ತ್ಯಾಜ್ಯ ಬೇರ್ಪಡಿಸುವ ಯಂತ್ರ, ಲಿಫ್ಟಿಂಗ್ ಯಂತ್ರ, ಶಿಫ್ಟಿಂಗ್ ವೆಹಿಕಲ್ ಮತ್ತು 6 ಲಕ್ಷ ರೂ. ವೆಚ್ಚದಲ್ಲಿ ಬೇಲಿಂಗ್ ಮಷಿನ್ ಅಳವಡಿಸಲಾಗಿದೆ.
ವಿದ್ಯುತ್ ಚಾಲಿತ ಯಂತ್ರಗಳು ಇಲ್ಲಿ ಕಾರ್ಯಾಚರಿಸುತ್ತವೆ. ಯಂತ್ರದ ಮೂಲಕ ಬೇರ್ಪಡಿಸಿದ ಒಣ ಕಸವನ್ನು ವಿವಿಧ ವಿಭಾಗಗಳಾಗಿ ಬೇಲಿಂಗ್ ಮಷಿನ್‌ಗೆ ಹಾಕಿ ಕಟ್ಟುಗಳಾಗಿ ಮಾಡಲಾಗುತ್ತದೆ. ಒಮ್ಮೆಗೆ ಸುಮಾರು 200 ಕೆಜಿಯ ಕಟ್ಟು ತಯಾರಿಸಬಹುದು. ಆದರೆ ಸಾಗಾಟದ ದೃಷ್ಟಿಯಿಂದ 80ರಿಂದ 100 ಕೆಜಿ ತನಕದ ಕಟ್ಟುಗಳನ್ನು ಮಾಡಲಾಗುತ್ತದೆ. ಬಿಳಿ ಪ್ಲಾಸ್ಟಿಕ್, ಬಣ್ಣದ ಪ್ಲಾಸ್ಟಿಕ್ ಕವರ್‌ಗಳು, ಬಟ್ಟೆಗಳು, ಕಾಗದ, ಜ್ಯೂಸ್, ಮದ್ಯ ಮತ್ತಿತರ ತುಂಬುವ ಟೆಟ್ರಾ ಪ್ಯಾಕ್‌ಗಳು, ಪ್ಲಾಸ್ಟಿಕ್ ಬಾಟಲಿಗಳು ಹೀಗೆ ವಿವಿಧ ಒಣ ಕಸಗಳ ಕಟ್ಟುಗಳನ್ನು ಮಾಡಲಾಗುತ್ತದೆ.
ಪ್ಲಾಸ್ಟಿಕ್ ಮರು ಬಳಕೆ ಮಾಡುವ ಕಾರ್ಖಾನೆಗಳಿಗೆ ಪ್ಲಾಸ್ಟಿಕ್ ಸೇರಿದ ಒಣ ಕಸ ಕಳುಹಿಸಲು ನಗರ ಪಂಚಾಯಿತಿ ಯೋಜನೆ ರೂಪಿಸಿದೆ. ಸಿಮೆಂಟ್, ಡಾಂಬರು ಮತ್ತಿತರ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮರು ಬಳಕೆ ಮಾಡಲಾಗುತ್ತದೆ. ಈಗಾಗಲೇ 4-5 ಟನ್ ಒಣ ತ್ಯಾಜ್ಯ ಕಟ್ಟುಗಳಾಗಿ ಮಾಡಲಾಗಿದೆ. ಸುಮಾರು 15 ಟನ್ ಆದ ಬಳಿಕ ಟೆಂಡರ್ ಕರೆದು ಪ್ಲಾಸ್ಟಿಕ್ ಮರುಬಳಕೆ ಮಾಡುವ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುವುದು. ಮರು ಬಳಕೆ ಮಾಡುವ ಕಾರಣ ಪ್ಲಾಸ್ಟಿಕ್ ಕಸದ ಸಮಸ್ಯೆ ಶೇ.90ರಷ್ಟು ಕಡಿಮೆಯಾಗಲಿದೆ ಎಂದು ನಪಂ ಮುಖ್ಯಾಧಿಕಾರಿ ಬಸವರಾಜ್ ಎಚ್.ಆರ್. ತಿಳಿಸಿದ್ದಾರೆ.