ಕಾಡಾನೆ ಹಾವಳಿಗೆ ಅಪಾರ ಕೃಷಿ ಹಾನಿ

ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಸಂಚಾರ
ಹಾನಿಗೊಂಡ ಡಾ.ಸೂರ್ಯನಾರಾಯಣ ಭಟ್ ಅವರ ಮನೆಯ ಗೇಟು.
ಹಾನಿಗೊಂಡ ಡಾ.ಸೂರ್ಯನಾರಾಯಣ ಭಟ್ ಅವರ ಮನೆಯ ಗೇಟು.
Published on: 

ಪುತ್ತೂರು ಗ್ರಾಮಾಂತರ: ಕಳೆದ ಕೆಲ ತಿಂಗಳ ಬಳಿಕ ಕಾಡಾನೆಯೊಂದು ಮಾಡ್ನೂರು ಗ್ರಾಮದ ಕಾವು ವ್ಯಾಪ್ತಿಗೆ ಲಗ್ಗೆಯಿಟ್ಟು ಹಲವು ಮಂದಿಯ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡುವ ಜತೆಗೆ ಮನೆಯೊಂದರ ಗೇಟನ್ನು ಜಖಂಗೊಳಿಸಿ ಭಯದ ವಾತಾವರಣ ಸೃಷ್ಟಿಸಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೆಲವು ತಿಂಗಳ ಹಿಂದೆ ಮಾಡ್ನೂರು ಗ್ರಾಮದ ಪೂವಂದೂರು, ಆಚಾರಿಮೂಲೆ, ಮದ್ದ, ಕೊಚ್ಚಿ, ಚಾಕೋಟೆ, ಮಳಿ ಮೊದಲಾದ ಕಡೆಗಳಿಗೆ ನಿರಂತರವಾಗಿ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದ್ದ ಕಾಡಾನೆ ಗುರುವಾರ ರಾತ್ರಿ ಕಾವು ನನ್ಯ ವ್ಯಾಪ್ತಿಗೆ ಲಗ್ಗೆಯಿಟ್ಟು ಹಲವು ಮಂದಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ. ರಾತ್ರಿ 11 ಗಂಟೆಯ ವೇಳೆಗೆ ಚಾಕೋಟೆ ಭಾಗಕ್ಕೆ ಬಂದಿದ್ದ ಒಂಟಿ ಕಾಡಾನೆ, ಅಲ್ಲಿಂದ ತಿರುಗಿ ಬಂದು ಕಾವು ನನ್ಯ, ಬಜಕಡೇಲು, ನಿಧಿಮುಂಡ, ಪಿಲಿಪಂಜರ, ಪಾದೆ ಮೊದಲಾದ ಭಾಗಗಳಿಗೆ ಕೃಷಿ ಹಾನಿ ಮಾಡುತ್ತಾ ತೆರಳಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಬಂದ ಕಾಡಾನೆ ನನ್ಯ ಶಾಲಾ ಬಳಿಯ ಡಾ.ಸೂರ್ಯನಾರಾಯಣ ಭಟ್ ಎಂಬವರ ಮನೆಯ ಕಬ್ಬಿಣದ ಗೇಟನ್ನು ತುಳಿದು ಜಖಂಗೊಳಿಸಿದೆ.

ನನ್ಯ ಅಚ್ಯುತ ಮೂಡೆತ್ತಾಯ, ಚಂದ್ರಶೇಖರ ರಾವ್ ನಿಧಿಮುಂಡ, ಪಿಲಿಪಂಜರ ಮಾನ್ಯಡ್ಕ ಭಾಗದ ಕೃಷಿಕರಾದ ಹೊನ್ನಪ್ಪ ಪೂಜಾರಿ, ಅಣ್ಣು ಪೂಜಾರಿ, ವಿನೋದ್ ಪೂಜಾರಿ ಅವರ ತೋಟಗಳಲ್ಲಿ ಕೃಷಿ ಹಾನಿ ಮಾಡಿದೆ.

ಗುರುವಾರ ರಾತ್ರಿ 9 ಗಂಟೆಗೆ ಅರಣ್ಯ ಇಲಾಖೆಯವರು ಪೆರ್ನಾಜೆ ವ್ಯಾಪ್ತಿಯಲ್ಲಿ ಸೈರನ್ ಮೊಳಗಿಸುತ್ತಾ ಹೋಗಿದ್ದಾರೆ. ಕಾಡಾನೆ ದಿಕ್ಕು ಬದಲಾಯಿಸಿ ನನ್ಯ ಕಡೆಗೆ ಹೋಗಿ ಕೃಷಿ ಹಾನಿ ಮಾಡಿದೆ ಎಂದು ಪೆರ್ನಾಜೆ ವ್ಯಾಪ್ತಿಯ ಕೃಷಿಕರು ಹೇಳಿದ್ದಾರೆ.

ಅರಣ್ಯ ಇಲಾಖೆಯಿಂದ ಶೋಧ ಕಾರ್ಯ

ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಬೆಳಗ್ಗೆಯೇ ಸ್ಥಳಕ್ಕಾಗಮಿಸಿ ಶೋಧ ಆರಂಭಿಸಿದ್ದಾರೆ. ಗುರುವಾರ ರಾತ್ರಿ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿರುವ ಎಲ್ಲ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆದು ಬಳಿಕ ಕಾಡಾನೆ ಸಂಚರಿಸಿದ ಹೆಜ್ಜೆ ಗುರುತಿನ ಆಧಾರದಲ್ಲಿ ಶೋಧ ಕಾರ್ಯ ನಡೆಸಿದ್ದು, ಕಾಡಾನೆಯು ಮುಂಡಕೊಚ್ಚಿ ಭಾಗದಲ್ಲಿ ಬೀಡುಬಿಟ್ಟಿರಬಹುದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ 20ಕ್ಕೂ ಅಧಿಕ ಮಂದಿ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶುಕ್ರವಾರ ರಾತ್ರಿ ವೇಳೆ ಕಾಡಾನೆಯನ್ನು ಕಾಡಿಗೆ ಅಟ್ಟಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net