ಉದ್ಯಮ ಆಧಾರಿತ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ

ಮಂಗಳೂರಿನಲ್ಲಿ ಡೆಲಾಯ್ಟ ಕಂಪೆನಿ ಉದ್ಘಾಟಿಸಿ ಪ್ರಿಯಾಂಕ ಖರ್ಗೆ
ಡೆಲಾಯ್ಟ ಮಂಗಳೂರು ಕಚೇರಿಯನ್ನು ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಿದರು. ಕಂಪೆನಿ ಸಿಇಒ ರೋಮಲ್ ಶೆಟ್ಟಿ, ನರ್ವಡೆ ವಿನಾಯಕ ಕರ್ಬಾರಿ, ರಾಹುಲ್ ರತ್ನಂ ಪಾಂಡೆ ಮೊದಲಾದವರಿದ್ದರು.
ಡೆಲಾಯ್ಟ ಮಂಗಳೂರು ಕಚೇರಿಯನ್ನು ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಿದರು. ಕಂಪೆನಿ ಸಿಇಒ ರೋಮಲ್ ಶೆಟ್ಟಿ, ನರ್ವಡೆ ವಿನಾಯಕ ಕರ್ಬಾರಿ, ರಾಹುಲ್ ರತ್ನಂ ಪಾಂಡೆ ಮೊದಲಾದವರಿದ್ದರು.
Published on: 

ಮಂಗಳೂರು: ಡೆಲಾಯ್ಟನಂತಹ ಜಾಗತಿಕ ಕಂಪೆನಿಗಳ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲೇ ತರಬೇತಿ ನೀಡಲು ಕೌಶಲ್ಯ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ರಾಜ್ಯ ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಕೊಟ್ಟಾರಚೌಕಿಯ ವರ್ಕ್‌ವರ್ಕ್ ಆವರಣದಲ್ಲಿ ಬುಧವಾರ ಅಮೇರಿಕಾ ಮೂಲದ ‘ಡೆಲಾಯ್ಟ’ ಭಾರತದ 27ನೇ ಕಚೇರಿ ಉದ್ಘಾಟಿಸಿ, ಅವರು ಮಾತನಾಡಿದರು.

ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ, ಎರಡನೇ ಹಂತದ ನಗರಗಳಿಗೂ ವಿಸ್ತರಿಸುವ ’ಬಿಯಾಂಡ್ ಬೆಂಗಳೂರು’ ನೀತಿಯಡಿ ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ ಜಿಡಿಪಿಗೆ ಬೆಂಗಳೂರು ಶೇ.40ರಷ್ಟು ಕೊಡುಗೆ ನೀಡುತ್ತಿದ್ದರೆ, ನಂತರದ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಹೊಂದಿದೆ ಎಂದರು.

ಸ್ಥಳೀಯವಾಗಿಯೇ ಉದ್ಯೋಗ:

ಬೆಂಗಳೂರಿನಲ್ಲಿರುವ ಒಟ್ಟು ಐಟಿ ಪ್ರತಿಭೆಗಳ ಪೈಕಿ ಶೇ.15ರಷ್ಟು ಮಂದಿ ಕರಾವಳಿ ಹಾಗೂ ಮಂಗಳೂರು ಮೂಲದವರು. ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಂಗಳೂರು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಪ್ರಮುಖ ಕೇಂದ್ರವಾಗಿರುವುದರಿಂದ ಇಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಹೆಲ್ತ್ ಸೈನ್ಸಸ್ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಉತ್ಪಾದನೆಗೆ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಎಲಿವೇಟ್’ ಯೋಜನೆಯಡಿ ನವೋದ್ಯಮಗಳಿಗೆ ಯಾವುದೇ ಷೇರು ಪಾಲುದಾರಿಕೆ ಇಲ್ಲದೆ 1 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಪ್ರತಿಭಾವಂತರ ಬಳಿಗೆ ಅವಕಾಶ

ಡೆಲಾಯ್ಟ ಮಂಗಳೂರು ಕಚೇರಿಯಲ್ಲಿ ಆರಂಭದಲ್ಲಿ ಸುಮಾರು 250 ವೃತ್ತಿಪರರು ಕಾರ್ಯನಿರ್ವಹಿಸಲಿದ್ದಾರೆ. ಹಂತ ಹಂತವಾಗಿ ಉದ್ಯೋಗಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಹೆಚ್ಚಿಸಲಾಗುವುದು. ಸ್ಥಳೀಯ ಪ್ರತಿಭಾವಂತರನ್ನು ಡೆಲಾಯ್ಟ ಇಂಡಿಯಾದ ರಾಷ್ಟ್ರೀಯ ಮತ್ತು ಜಾಗತಿಕ ಗ್ರಾಹಕ ಜಾಲದ ಅವಕಾಶಗಳೊಂದಿಗೆ ಬೆಸೆಯಲಿದೆ. ವಿವಿಧ ವಲಯಗಳಲ್ಲಿ ಹೆಚ್ಚುತ್ತಿರುವ ಡೆಲಾಯ್ಟ ಇಂಡಿಯಾದ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಈ ಹೊಸ ಕಚೇರಿಯ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡೇಟಾ ಮತ್ತು ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕನ್ಸಲ್ಟಿಂಗ್, ತೆರಿಗೆ, ರಿಸ್ಕ್ ಅಡ್ವೈಸರಿ ಮತ್ತು ಇತರ ಉದಯೋನ್ಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ವೇದಿಕೆಯಾಗಲಿದೆ ಎಂದು ಡೆಲಾಯ್ಟ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ ತಿಳಿಸಿದರು.

ಸುಸ್ಥಿರ ಪ್ರತಿಭಾ ವ್ಯವಸ್ಥೆಯ ನಿರ್ಮಾಣ

ಡೆಲಾಯ್ಟ ಇಂಡಿಯಾ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಲು ಯೋಜಿಸಿದೆ. ಪ್ರಸ್ತುತ ದೊಡ್ಡ ನಗರಗಳಲ್ಲಿ ಕಾರ್ಯನಿರ್ವಹಿಸುವ ಡೆಲಾಯ್ಟ ವೃತ್ತಿಪರರು ತಮ್ಮ ಕುಟುಂಬಗಳಿಗೆ ಹತ್ತಿರವಾಗುವಂತೆ ಇಲ್ಲಿಗೆ ಸ್ಥಳಾಂತರವಾಗಲು ಅವಕಾಶಗಳನ್ನು ಕಲ್ಪಿಸಲಿದೆ. ಈ ಕಚೇರಿಯು ಅನುಭವಿ ವೃತ್ತಿಪರರು, ಹೊಸ ಪದವೀಧರರು ಮತ್ತು ವಿವಿಧ ಕ್ಷೇತ್ರಗಳ ವಿಶೇಷ ಪರಿಣಿತರನ್ನು ಆಕರ್ಷಿಸಲಿದೆ ಎಂದು ರೋಮಲ್ ಶೆಟ್ಟಿ ಹೇಳಿದರು.

ಭಾರತದ ಸಿಲಿಕಾನ್ ಬೀಚ್ ಎಂದು ಕರೆಯಲ್ಪಡುವ ಮಂಗಳೂರು ತಂತ್ರಜ್ಞಾನ ಹಾಗೂ ನಾವಿನ್ಯತಾ ಕೇಂದ್ರವಾಗಿ ಹೊರ ಹೊಮ್ಮುತ್ತಿರುವುದು ಜಾಗತಿಕ ಉದ್ಯಮಗಳು ಮತ್ತು ಉನ್ನತ ಮೌಲ್ಯದ ಜ್ಞಾನ ಆಧಾರಿತ ಸೇವೆಗಳಿಗೆ ಆಕರ್ಷಕ ತಾಣವಾಗಿದೆ. ಮಂಗಳೂರಿನ ಉತ್ತಮ ಜೀವನ ಮಟ್ಟ, ಕಡಿಮೆ ಪ್ರಯಾಣದ ಅವಧಿ, ಸದೃಢ ಸಮುದಾಯಗಳು ಮತ್ತು ಕರಾವಳಿಯ ಜೀವನಶೈಲಿಯು ಸಾಂಪ್ರದಾಯಿಕ ಮಹಾನಗರಗಳ ಹೊರಗೆ ದೀರ್ಘಕಾಲದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ವೃತ್ತಿಪರರಿಗೆ ಇದನ್ನು ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಲಾಗಿದೆ ಎಂದವರು ಹೇಳಿದರು.

ವರ್ಕ್‌ವರ್ಕ್ ಸಂಸ್ಥಾಪಕ ರೋಹಿತ್ ಭಟ್, ಜಿಪಂ ಸಿಇಒ ನರ್ವಡೆ ವಿನಾಯಕ ಕರ್ಬಾರಿ, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಮೊದಲಾದವರಿದ್ದರು.