

ವಿಜಯವಾಣಿ ಸುದ್ದಿಜಾಲ ಕುಂಬಳೆ
ರೈಲು ಪ್ರಯಾಣಿಕರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಲು ಹಾಗೂ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಕೇಂದ್ರ ರೈಲ್ವೆ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಮಂಗಳೂರಿನಿಂದ ತಿರುವನಂತಪುರಂವರೆಗಿನ ಪ್ರಮುಖ ರೈಲ್ವೆ ಕಾರಿಡಾರ್‌ನಲ್ಲಿ 3ನೇ ಮತ್ತು 4ನೇ ಹಳಿಗಳ (ಮಾರ್ಗ) ನಿರ್ಮಾಣ ಪ್ರಕ್ರಿಯೆಯನ್ನು ವೇಗಗೊಳಿಸಲು ಉನ್ನತ ಮಟ್ಟದ ಸೂಚನೆ ನೀಡಲಾಗಿದೆ.
ಪ್ರಸ್ತುತ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆ ಪ್ರಕ್ರಿಯೆಯು ಶರವೇಗದಲ್ಲಿ ಸಾಗುತ್ತಿದ್ದು, ಮತ್ತೊಂದೆಡೆ ರೈಲು ಹಳಿಗಳು ಹಾದುಹೋಗುವ ವ್ಯಾಪ್ತಿಯ ಕರಾವಳಿ ಮತ್ತು ವಸತಿ ಪ್ರದೇಶಗಳ ನಿವಾಸಿಗಳಲ್ಲಿ ಮನೆ ಹಾಗೂ ಜಾಗ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.
ಮಂಗಳೂರಿನಿಂದ ತಿರುವನಂತಪುರಂವರೆಗಿನ ಸುಮಾರು 800 ಕಿ.ಮೀ.ಗೂ ಹೆಚ್ಚಿನ ಉದ್ದದ ರೈಲು ಹಳಿ ನಿರ್ಮಾಣದ ಯೋಜನೆಯ ಪ್ರಾಥಮಿಕ ಹಾಗೂ ವೈಮಾನಿಕ ಸಮೀಕ್ಷೆಗಳು ಈಗಾಗಲೇ ಪೂರ್ಣಗೊಂಡಿವೆ. ಮಂಗಳೂರು- ಶೋರ್ನೂರು, ಶೋರ್ನೂರು-ಎರ್ನಾಕುಳಂ, ಎರ್ನಾಕುಳಂ-ಕಾಯಂಕುಳಂ ಮತ್ತು ಕಾಯಂಕುಳಂ-ತಿರುವನಂತಪುರಂಗಳ ಮುಖ್ಯ ವಿಭಾಗಗಳಲ್ಲಿ ಪ್ರಾಥಮಿಕ ಸಮೀಕ್ಷೆ ಮತ್ತು ಮಾರ್ಗ ನಿರ್ಣಯವು ಈಗಾಗಲೇ ಪೂರ್ಣಗೊಂಡಿದೆ.
ಆರಂಭದಲ್ಲಿ 3ನೇ ಹಳಿಯನ್ನಷ್ಟೇ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಭವಿಷ್ಯದ ಪ್ರಯಾಣಿಕರ ಸಂಖ್ಯೆ ಮತ್ತು ಹೈಸ್ಪೀಡ್ ರೈಲುಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯಲ್ಲಿ 4ನೇ ಹಳಿಯನ್ನೂ ಸೇರಿಸಲು ನಿರ್ಧರಿಸಲಾಗಿದೆ.
ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಮುಂದಿನ ಆರು ತಿಂಗಳೊಳಗೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ರೈಲು ಹಳಿಗಳು ಹೆಚ್ಚು ತಿರುವುಗಳನ್ನು ಹೊಂದಿರುವುದರಿಂದ ರೈಲುಗಳ ಸರಾಸರಿ ವೇಗ ಗಂಟೆಗೆ 50 ರಿಂದ 55 ಕಿ.ಮೀ.ಗೆ ಸೀಮಿತವಾಗಿದೆ. ಹೊಸ ಮಾರ್ಗ ನಿರ್ಮಾಣದಿಂದ ಈ ನ್ಯೂನತೆಗಳು ನಿವಾರಣೆಯಾಗಿ, ರೈಲುಗಳ ವೇಗವನ್ನು ಗಂಟೆಗೆ 160 ಕಿ.ಮೀ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕಣ್ಣೂರು-ಮಂಗಳೂರು ವಿಭಾಗದಲ್ಲಿ ಹೊಸ ಹಳಿಗಳು ಪಶ್ಚಿಮ ದಿಕ್ಕಿನಿಂದ ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ. 3 ಮತ್ತು 4ನೇ ಹಳಿಗಳ ನಿರ್ಮಾಣಕ್ಕೆ ಒಟ್ಟಿಗೇ ಭೂಮಿ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಾಗಲೇ 1,976 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಮುಂದಿನ 5 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂದು ದಕ್ಷಿಣ ರೈಲ್ವೆ ಅಂದಾಜಿಸಿದೆ.
ಕಾಸರಗೋಡು ಸೇರಿದಂತೆ ಕರಾವಳಿಯ ನೂರಾರು ವಸತಿ ಪ್ರದೇಶಗಳಲ್ಲಿ ದಶಕಗಳಿಂದ ಸ್ವಂತ ಭೂಮಿಯಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ರೈಲ್ವೆ ಯೋಜನೆಗಾಗಿ ಜಾಗ ತೆರವಾಗುವ ಆತಂಕದಲ್ಲಿವೆ. ಮುಂಬರುವ ತಿಂಗಳುಗಳಲ್ಲಿ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗುತ್ತಿದ್ದು, ಈ ಮಾರ್ಗಗಳ ಅಭಿವೃದ್ಧಿ ಆರ್ಥಿಕವಾಗಿ ಲಾಭದಾಯಕವೇ ಎಂಬುದನ್ನು ಪರಿಶೀಲಿಸಿ ರೈಲ್ವೆ ಮಂಡಳಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಪ್ರದೇಶದ ಅಭಿವೃದ್ಧಿಗೆ ಮತ್ತು ಸಾರಿಗೆ ವೇಗಕ್ಕೆ ಹೊಸ ರೈಲು ಮಾರ್ಗಗಳು ಅಗತ್ಯ ನಿಜ. ಆದರೆ, ಕರಾವಳಿಯ ಸಾಮಾನ್ಯ ಜನರ ಜೀವನೋಪಾಯ, ವಸತಿಗೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂಬುದು ಸಾರ್ವಜನಿಕರ ಬಲವಾದ ಆಗ್ರಹವಾಗಿದೆ.