ಪೆರ್ಲ-ಪೂವನಡ್ಕ ರಸ್ತೆ ಅಭಿವೃದ್ಧಿ

4 ಕೋಟಿ ರೂ. ವೆಚ್ಚದಲ್ಲಿ 6.6. ಕಿ.ಮೀ. ಮರು ಡಾಂಬರೀಕರಣ
 ಭರದಿಂದ ಸಾಗುತ್ತಿರುವ ಪೆರ್ಲ-ಪೂವನಡ್ಕ ರಸ್ತೆ ಅಭಿವೃದ್ಧಿ ಕಾರ್ಯ.
ಭರದಿಂದ ಸಾಗುತ್ತಿರುವ ಪೆರ್ಲ-ಪೂವನಡ್ಕ ರಸ್ತೆ ಅಭಿವೃದ್ಧಿ ಕಾರ್ಯ.
Published on: 

ಪುರುಷೋತ್ತಮ ಪೆರ್ಲ

ಎಣ್ಮಕಜೆ ಪಂಚಾಯಿತಿಯ ಪೆರ್ಲ-ಪೂವನಡ್ಕ ರಸ್ತೆ ಅಭಿವೃದ್ಧಿಯಾಗಬೇಕೆಂಬ ಇಲ್ಲಿನ ಜನತೆಯ ದೀರ್ಘಕಾಲದ ಬೇಡಿಕೆ ಸಾಕಾರದತ್ತ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಪೆರ್ಲ-ಪೂವನಡ್ಕ ರಸ್ತೆಯ ಮರು ಡಾಂಬರೀಕರಣ ಮತ್ತು ನವೀಕರಣ ಕಾಮಗಾರಿ ಆರಂಭಗೊಂಡಿದ್ದು, 4 ಕೋಟಿ ರೂ. ಮೊತ್ತದಲ್ಲಿ ಒಟ್ಟು 6.6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದೆ.

ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಪೆರ್ಲ ಪೇಟೆಯಿಂದ ಬಜಕೂಡ್ಲು-ಕುರಡ್ಕ-ಬೇಂಗಪದವು ಹಾದಿಯಾಗಿ ಪೂವನಡ್ಕಕ್ಕೆ ಸಂಪರ್ಕ ಕಲ್ಪಿಸುವ ಪ್ರಸಕ್ತ ರಸ್ತೆ ನಿರಂತರ ಭಾರಿ ವಾಹನಗಳ ಸಂಚಾರದಿಂದ ಕೆಲವೊಂದು ಪ್ರದೇಶದಲ್ಲಿ ಹೇಳ ಹೆಸರಿಲ್ಲದಂತೆ ಶಿಥಿಲಗೊಂಡಿದೆ. ಪೆರ್ಲ ಆಯುರ್ವೇದ ಮತ್ತು ಹೋಮಿಯೋ ಆಸ್ಪತ್ರೆ, ಕುರಡ್ಕ ಹಾಗೂ ಬೇಂಗಪದವು ಮೊದಲಾದೆಡೆ ಬೃಹತ್ ಗುಂಡಿಗಳಿಂದ ದ್ವಿಚಕ್ರ ವಾಹನ, ಆಟೋ ರಿಕ್ಷಾ ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ.

ಪೂವನಡ್ಕ ಹೊಳೆ ಸಮೀಪದವರೆಗೂ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ನೂತನ ಕಾಮಗಾರಿ ಯೋಜನೆಯನ್ವಯ ಹಳೇ ಡಾಂಬರನ್ನು ಸಂಪೂರ್ಣ ಕ್ರಶ್ ಮಾಡಿ, ಅದರ ಮೇಲೆ ರೋಲರ್ ಹಾಯಿಸಿ ನಂತರ ಕಾಂಕ್ರೀಟ್ ಮಿಶ್ರಣ ಹರಡಲಾಗತ್ತದೆ. ಇದನ್ನು ಸಮತಟ್ಟುಗೊಳಿಸಿದ ನಂತರ ಡಾಂಬರೀಕರಣ ನಡೆಸಲಾಗುತ್ತದೆ. ಕಳೆದ ಎಡರಂಗ ಸರ್ಕಾರದ ಅವಧಿಯಲ್ಲೇ ಈ ಯೋಜನೆಗೆ ಮಂಜೂರಾತಿ ಲಭಿಸಿತ್ತು.

ಅಭಿವೃದ್ಧಿ ಪರ್ವ

ಈಗಾಗಲೇ ಪೂವನಡ್ಕದ ಸೀರೆಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 26 ಕೋಟಿ ರೂ. ಮೊತ್ತ ಮಂಜೂರುಗೊಳಿಸಿದ್ದು, ಸೇತುವೆ ಸಂಪರ್ಕಿಸುವ ಕೇರಳ ಹಾಗೂ ಕರ್ನಾಟಕ ಪ್ರದೇಶದಲ್ಲಿ ಸರ್ವೇ ಕಾರ್ಯವನ್ನೂ ಪೂರ್ತಿಗೊಳಿಸಲಾಗಿದೆ. ಸೇತುವೆ ಕಾಮಗಾರಿ ಪೂರ್ತಿಗೊಂಡಲ್ಲಿ ಪೆರುವಾಯಿ-ಮಾಣಿಲದ ಜತೆಗೆ ಪೆರ್ಲ ಸೇರಿದಂತೆ ಆಸುಪಾಸಿನ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಸಂಪರ್ಕ ಮಾರ್ಗ

ಈಗಾಗಲೇ ಪೆರ್ಲ-ಪೂವನಡ್ಕ ರಸ್ತೆಯ ಕುರಡ್ಕದಿಂದ ಒಂದೂವರೆ ಕಿ.ಮೀ. ಸಂಚರಿಸಿದಲ್ಲಿ ನಡುಬೈಲು ಹಾದಿಯಾಗಿ ಬೆದ್ರಂಪಳ್ಳದಲ್ಲಿ ಪೆರ್ಲ-ಪುತ್ತಿಗೆ-ಸೀತಾಂಗೋಳಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಬಹುದಾಗಿದೆ. ಕುರಡ್ಕದಿಂದ ಸೇರಾಜೆ-ಇಡ್ಯಾಲ-ಶಿರಿಯ ಅಣೆಕಟ್ಟು ಮೂಲಕ ಮಣಿಯಂಪಾರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗಾಗಲೇ ಕೇಂದ್ರ ಸರ್ಕಾರದ ಧನಸಹಾಯದೊಂದಿಗೆ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸಿದರೂ ಸೀತಾಂಗೋಳಿ ಮೂಲಕ ಕುಂಬಳೆಗೆ ಸುಲಭವಾಗಿ ತಲುಪಬಹುದಾಗಿದೆ.

ಸೇತುವೆಗೆ ಕರ್ನಾಟಕ ಸರ್ಕಾರ ಅನುದಾನ ಮಂಜೂರುಗೊಳಿಸಿದ್ದು, ಪೂವನಡ್ಕ ಸಂಪರ್ಕಿಸುವ ಪ್ರದೇಶ ಕೇರಳದಲ್ಲಿರುವುದರಿಂದ ನಿರಾಕ್ಷೇಪಣಾ ಪತ್ರದ ಅಗತ್ಯವಿದೆ. ಕಾಸರಗೋಡು ಜಿಲ್ಲಾಧಿಕಾರಿ ಮೂಲಕ ಶೀಘ್ರವೇ ಎನ್‌ಒಸಿ ಸಲ್ಲಿಕೆಯಾಗಲಿದ್ದು, ಸೇತುವೆ ಕಾಮಗಾರಿಗೆ ಒಂದೆರಡು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಸೋಮಶೇಖರ ಜೆ.ಎಸ್., ಸದಸ್ಯ ಕಾಸರಗೋಡು ಜಿಪಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net