

ವಿಜಯವಾಣಿ ಸುದ್ದಿಜಾಲ ಗುರುಪುರ
ಖಾಸಗಿ ಬಸ್ ಲಾಬಿಗಳಿಗೆ ಸಾರಿಗೆ ಅಧಿಕಾರಿಗಳು ಭಯಪಡುತ್ತಿದ್ದಾರೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳು ಖಾಸಗಿ ಬಸ್ ಮಾಲೀಕರ ಬಗ್ಗೆ ಅನುಕಂಪ ಹೊಂದಿದ್ದಾರೆ. ಸತತ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಸಲು ನಿರಾಕರಿಸಲಾಗುತ್ತಿದೆ. ಈ ಬಾರಿ ಬೇಡಿಕೆ ಈಡೇರದೆ ಹೋದಲ್ಲಿ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
ಮೂಲಸೌಲಭ್ಯಗಳಿಂದ ವಂಚಿತಗೊಂಡಿರುವ ಮಂಗಳೂರು ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಕೊಂಪದವು, ಮುಚ್ಚೂರು, ನೀರುಡೆ, ಬಂಗೇರಪದವು ಗ್ರಾಮಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸುವಂತೆ ಒತ್ತಾಯಿಸಿ ಮುಚ್ಚೂರು, ಕೊಂಪದವು ನಾಗರಿಕ ಹೋರಾಟ ಸಮಿತಿ ಸೋಮವಾರ ಮುಚ್ಚೂರು ಗ್ರಾಪಂ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿತು.
ಕಾರ್ಮಿಕ ಮುಖಂಡ ಸದಾಶಿವದಾಸ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಭವ್ಯಾ ಮುಚ್ಚೂರು ಮಾತನಾಡಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಪ್ರಮುಖರಾದ ಹರಿಶ್ಚಂದ್ರ ಗೌಡ ಕೊಂಪದವು, ಬಾಬು ಗೌಡ, ರವೀಂದ್ರ ಶೆಟ್ಟಿಗಾರ ಮುಚ್ಚೂರು, ರಾಮಣ್ಣ ಶೆಟ್ಟಿಗಾರ ಕೊಂಪದವು, ವೇದಾವತಿ ಮುಚ್ಚೂರು, ಹೇಮಲತಾ, ಆನಂದ ದೇವಾಡಿಗ ಮತ್ತಿತರರು ಇದ್ದರು. ಸಮಿತಿ ಸಂಚಾಲಕ ನೋಣಯ್ಯ ಗೌಡ ಸ್ವಾಗತಿಸಿದರು. ಪ್ರದೇಶ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕ ಮಾತನಾಡಿದರು. ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.