

ಪ್ರವೀಣ್ ರಾಜ್ ಕೊೖ ಲ ಕಡಬ
ಕಡಬ ತಾಲೂಕು ಕೊೖಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ತ್ರಿವೇಣಿ ಸರ್ಕಲ್-ಏಣಿತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಂದ ರಸ್ತೆ ಸಂಚಾರ ದುಸ್ತರವಾಗಿದ್ದು, ಆಕ್ರೋಶಗೊಂಡ ರಸ್ತೆ ಫಲಾನುಭವಿಗಳು ಸುಸಜ್ಜಿತ ರಸ್ತೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಈ ರಸ್ತೆಯ ಗೋಳಿತ್ತಡಿಯಿಂದ ತ್ರೀವೇಣಿ ಸರ್ಕಲ್ ತನಕದ ಸುಮಾರು 2.5 ಕಿ.ಮೀ. ದೂರದ ತನಕ ಹೆಚ್ಚು ಹೊಂಡಗಳು ನಿರ್ಮಾಣವಾಗಿ ಸಂಚಾರ ಅಯೋಗ್ಯವಾಗಿದೆ. ನಿತ್ಯವೂ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಕಳೆದ ದಶಕಗಳಿಂದ ಒಂದಷ್ಟು ತೇಪೆ ಕಾರ್ಯಕ್ಕೆ ಒಳಪಡುತ್ತಿದೆ. ಪ್ರತಿ ಬಾರಿ ಮಳೆಗಾಲದಲ್ಲಿ ಆರಂಭದಲ್ಲೇ ತೇಪೆ ಕಿತ್ತು ಹೋಗಿ ಮತ್ತದೇ ಹೊಂಡಗಳು ಬಾಯ್ತೆರೆದುಕೊಳ್ಳುತ್ತದೆ.
35 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿತ್ತು. 8 ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಮರುಡಾಂಬರೀಕರಣಗೊಳಿಸಲಾಗಿತ್ತು. ಕೆಲವು ತಿಂಗಳ ಒಳಗೆ ಮತ್ತೆ ರಸ್ತೆ ಹೊಂಡಮಯವಾಯಿತು. ಕಳಪೆ ಕಾಮಗಾರಿಯ ಅಸಮಾಧಾನ ಬೆನ್ನಲ್ಲೇ ಮರುಡಾಂಬರೀಕರಣ ಮಾಡಿದರೂ ಮತ್ತೆ ಮುಂದಿನ ವರ್ಷ ಹೊಂಡಮಯವಾಯಿತು. ಬಳಿಕ ಅಂದಿನ ಶಾಸಕ ಎಸ್.ಅಂಗಾರ ಅವರ ಶಿಫಾರಸ್ಸಿನಂತೆ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ 4.50 ಲಕ್ಷ ರೂ. ವೆಚ್ಚದಲ್ಲಿ ತೇಪೆ ಕಾರ್ಯ ನಡೆಯಿತು. ಬಳಿಕ ಪ್ರಸ್ತುತ ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸ್ಸಿನಂತೆ ಕಳೆದ ವರ್ಷ 9.13 ಲಕ್ಷ ರೂ. ವೆಚ್ಚದಲ್ಲಿ ತೇಪೆ ಹಾಕಲಾಗಿತ್ತು. ಆದರೆ ರಸ್ತೆ ಮತ್ತೆ ಹೊಂಡಮಯವಾಗಿದೆ.
ಫಲಾನುಭವಿಗಳ ಸಭೆ, ಹೋರಾಟದ ನಿರ್ಧಾರ: ಈ ರಸ್ತೆಯ ಫಲಾನುಭವಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ವಿವಿಧ ರಾಜಕೀಯ ಪಕ್ಷದ ಮುಖಂಡರು, ಸ್ಥಳೀಯ ಮುಂದಾಳುಗಳು ಹೋರಾಟದ ರೂಪುರೇಷೆ ಚರ್ಚಿಸಿದ್ದಾರೆ. ಆರಂಭದಲ್ಲಿ ರಸ್ತೆ ದುಸ್ಥಿತಿ ಬಗ್ಗೆ ಕ್ಷೇತ್ರದ ಶಾಸಕರಿಗೆ, ಸಂಸದರಿಗೆ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ವಿವಿಧ ರಾಜಕೀಯ ಪಕ್ಷದ ಜಿಲ್ಲಾಮಟ್ಟದ ಮುಖಂಡರಿಗೆ, ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಮನವರಿಕೆ ಮಾಡಿ ತಕ್ಷಣ ಕ್ರಮಕೈಗೊಳ್ಳುವ ಬಗ್ಗೆ ಮನವಿ ಸಲ್ಲಿಸುವುದು. ಭರವಸೆ ಈಡೇರದಿದ್ದರೆ ಉಗ್ರ ಹೋರಾಟ, ಮತದಾನ ಬಹಿಷ್ಕಾರ ಮೊದಲಾವುಗಳ ಬಗ್ಗೆ ನಿರ್ಣಯಿಸಲಾಗಿದೆ.
ಈ ಪೈಕಿ ಈಗಾಗಲೇ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ರಸ್ತೆಗೆ 800 ಮೀಟರ್‌ನಷ್ಟು ಡಾಂಬರೀಕರಣಕ್ಕೆ ಅನುದಾನ ಬಿಡುಗಡೆಗೊಂಡಿದೆ. ಈ ಕಾಮಗಾರಿ ಮುಂದುವರಿದು ತ್ರಿವೇಣಿ ಸರ್ಕಲ್ ತನಕ ಬೇರೆ ಅನುದಾನ ಹೊಂದಿಸಿಕೊಂಡು ಡಾಂಬರೀಕರಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೋರಾಟದ ಮುಂದಾಳು ಸುಂದರ ನಾಯ್ಕ ಚೆಕ್ಕಿತಡ್ಕ ತಿಳಿಸಿದ್ದಾರೆ. ಮನವಿ ನೀಡುವ ಸಂದರ್ಭ ಭವಾನಿಶಂಕರ ಗೌಡ ಪರಂಗಾಜೆ, ರಾಮಚಂದ್ರ ನಾಯ್ಕ ಏಣಿತಡ್ಕ, ಸುಂದರ ನಾಯ್ಕ ಚೆಕ್ಕಿತಡ್ಕ, ಭರತ್ ಒ.ಕೆ, ಚಿದಾನಂದ ಪನ್ಯಾಲು, ಪ್ರವೀಣ್ ನೀಡೇಲು, ಗಣೇಶ್ ಎರ್ಮಡ್ಕ, ಸಾಂತಪ್ಪ ಗೌಡ ಕೊಲ್ಯ, ಉಮೇಶ್ ಸಂಕೇಶ ಇದ್ದರು.
ದಿನನಿತ್ಯ ಸಾವಿರಾರು ಜನ, ನೂರಾರು ವಾಹನ ಸಂಚಾರವಿದೆ. ಮಳೆೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಂಡು ಅವಘಡಗಳಿಗೆ ದಾರಿಯಾಗುತ್ತಿದೆ. ಪರಂಗಾಜೆ ಮತ್ತು ಏಣಿತಡ್ಕದಲ್ಲಿ ಕುಮಾರಧಾರಾ ನದಿಯಿಂದ ಮರಳುಗಾರಿಕೆ ನಡೆಸುವ ಟನ್‌ಗಟ್ಟಲೆ ಭಾರದ ಲಾರಿಗಳು ಓಡಾಡುವುದರಿಂದ ರಸ್ತೆ ಇನ್ನಷ್ಟೂ ಶಿಥಿಲವಾಗಲು ಕಾರಣ ಎನ್ನುವ ಆರೋಪವೂ ವ್ಯಕ್ತವಾಗಿದೆ. ಸಂಪೂರ್ಣ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕೆನ್ನುವುದು ಸ್ಥಳಿಯರ ಆಗ್ರಹ. ಅಲ್ಲದೆ ಏಣಿತಡ್ಕದಿಂದ ಈ ರಸ್ತೆ ಮುಂದುವರಿದು ಕಕ್ವೆ, ಪಜ್ಜಾಪು ಮೂಲಕ ಆಲಂಕಾರು ಪೇಟೆಗೂ ಸಂಪರ್ಕ ಕಲ್ಪಿಸುತ್ತದೆ.
ಈ ರಸ್ತೆಯ ಗೋಳಿತ್ತಡಿಯಿಂದ ಸುಮಾರು 800 ಮೀ.ನಷ್ಟು ಉದ್ದಕ್ಕೆ ಡಾಂಬರೀಕರಣಕ್ಕೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ಯೋಜನೆಯಡಿ ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸಿನಂತೆ ಸುಮಾರು 40 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಆದರೆ ಡಾಂಬರು ಲಭ್ಯವಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿಲ್ಲ. ಮಳೆಗಾಲ ಸಂಪೂರ್ಣ ಮುಗಿದ ಬಳಿಕ ಕಾಮಗಾರಿ ಆರಂಭಗೊಳ್ಳುವ ಭರವಸೆ ಶಾಸಕರು ನೀಡಿದ್ದಾರೆ.