

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪಾಲಡ್ಕ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಲೋಕಾಯುಕ್ತ ಕೇಸ್ ಆರೋಪದ ಕುರಿತು ಮಾತಿನ ಚಕಮಕಿ ನಡೆಯಿತು.
ಕಡಂದಲೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಹರೀಶ್ ಶೆಟ್ಟಿ ಎಂಬುವರು ಮಾತನಾಡುತ್ತಿದ್ದ ವೇಳೆ ಜಿಪಂ ಮಾಜಿ ಸದಸ್ಯೆ ಸುನೀತಾ ಸುಚರಿತ ಶೆಟ್ಟಿ ಮಧ್ಯಪ್ರವೇಶಿಸಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲು ಗ್ರಾಮದಿಂದ ಬಂದವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಪ್ರತಿಕ್ರಿಯಿಸಿದ ಹರೀಶ್ ಶೆಟ್ಟಿ, ಲೋಕಾಯುಕ್ತ ಕೇಸ್ ಆದವರು ಕೂಡ ವೇದಿಕೆಯಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸುಚರಿತ ಶೆಟ್ಟಿ, ತಮ್ಮ ವಿರುದ್ಧ ಯಾವುದೇ ಲೋಕಾಯುಕ್ತ ಪ್ರಕರಣವಿಲ್ಲ ಎಂದು ತಿಳಿಸಿ, ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದರು.
ಕಲ್ಲೋಳಿ ಪ್ರದೇಶದ ಹದಗೆಟ್ಟ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಸುನೀಲ್ ಮಡಿಕೆ ಮನವಿ ಮಾಡಿದರು. ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸುವಂತೆಯೂ ಒತ್ತಾಯಿಸಿದರು.
ಗ್ರಾಮಸ್ಥ ಸುಕೇಶ್ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವರು ಎನ್‌ಜಿಒಗಳ ಹೆಸರನ್ನು ಹೇಳಿಕೊಂಡು ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ತಂದರು.
ಸಭೆಯಲ್ಲಿ ಹಿಂದಿನ ನಡವಳಿ, ಜಮಾಖರ್ಚು, ವಾರ್ಡ್ ಸಭೆಗಳ ವರದಿ, ಕಾಮಗಾರಿಗಳು, ವಸತಿನಿವೇಶನ ರಹಿತರ ಪಟ್ಟಿ, ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತ್ರಿ ಮಿಷನ್ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಲೆಕ್ಕಸಹಾಯಕಿ ಮೋಹಿನಿ ಕುಮಾರಿ, ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ರಾಯಪ್ಪ ಈಳಿಗೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆ, ಪಿಡಬ್ಲ್ಯುಡಿ ಸಭೆಗೆ ಗೈರಾಗಿದ್ದವು.
ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ 2016ರ ರಾಜ್ಯಪತ್ರದ ಆದೇಶ ಉಲ್ಲಂಘಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥ ಭಾಸ್ಕರ್ ಆರೋಪಿಸಿದರು. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದರು. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಮಂಜುಳಾ ಹುನಗುಂದ ತಿಳಿಸಿದರು.