

ಬಂಟ್ವಾಳ: ರಿಕ್ಷಾ ಚಾಲಕರು ತಮ್ಮ ಶ್ರಮದ ಮೂಲಕ ಸಮಾಜದ ಜನರಿಗೆ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸಮಾಜದಲ್ಲಿ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಶ್ರಮ ಮತ್ತು ಸೇವೆ ಸಮಾಜದ ದೈನಂದಿನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ಬದುಕಿಗೆ ನೆರವಾಗುವುದು ಅಗತ್ಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸಲಾದ ರಿಕ್ಷಾ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸವಾಲನ್ನು ಸವಾಲಾಗಿ ಸ್ವೀಕರಿಸಿ ದೃಢಸಂಕಲ್ಪದಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಜನರ ಅಗತ್ಯ ಅರಿತು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಪ್ರಮುಖರಾದ ಶಶಿಧರ್ ಶೆಟ್ಟಿ ಕುಳಾಲು, ಕೇಶವ ರಾವ್ ನೂಜಿಪಾಡಿ, ದೇವಿದಾಸ ಶೆಟ್ಟಿ ಪಾಲ್ತಾಜೆ, ಹರೀಶ್ ಟೈಲರ್ ಮಂಕುಡೆ, ಕೃಷ್ಣ ಶೆಟ್ಟಿ ಅಗರಿ, ವಿದ್ಯೇಶ್ ರೈ, ಪ್ರಶಾಂತ್ ಶೆಟ್ಟಿ ಅಗರಿ, ದಾಮೋದರ್ ರೈ ಕಿಲಂಬಲೆ ಪಡ್ಪು ಹಾಗೂ ರಿಕ್ಷಾ ಮಾಲೀಕ-ಚಾಲಕರ ಸಂಘದ ಅಧ್ಯಕ್ಷ ಸಿರಾಜುದ್ದೀನ್ ಉಪಸ್ಥಿತರಿದ್ದರು. ಪ್ರದೀಪ್ ಸ್ವಾಗತಿಸಿದರು. ಗಣೇಶ್ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.