ಸಂಪಾಜೆ-ಪಡೀಲ್‌ಗೆ ಸ್ವಚ್ಛ ದಂಡಯಾತ್ರೆ PUTTUR

೧೦೦ ಕಿ.ಮೀ. ಪಾದಯಾತ್ರೆ ಕೈಗೊಂಡ ಹಸಿರು ದಳದ ಸದಸ್ಯ ನಾಗರಾಜ್ ಬಜಾಲ್ * ಅಂಗಡಿ, ಪಂಚಾಯಿತಿ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಾಗಾರ * ರಸ್ತೆಯ ಎಲ್ಲೆಂದರಲ್ಲಿ ಕಸ ಎಸೆಯದಂತೆ ವಾಹನ ಸವಾರರಿಗೆ ಅರಿವು
Cleanliness Campaign
ತ್ಯಾಜ್ಯ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡುತ್ತಿರುವ ನಾಗರಾಜ್ ಬಜಾಲ್.
Published on: 

ಪುತ್ತೂರು: ತ್ಯಾಜ್ಯ ನಿರ್ವಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಸಿರು ದಳದ ಸದಸ್ಯ ನಾಗರಾಜ್ ಬಜಾಲ್ ‘ಸ್ವಚ್ಛ ದಂಡಯಾತ್ರೆ’ ಹಮ್ಮಿಕೊಂಡಿದ್ದಾರೆ. ಸುಮಾರು ೧೦೦ ಕಿ.ಮೀ. ಪಾದಯಾತ್ರೆಯುದ್ದಕ್ಕೂ ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಹೆಕ್ಕುವುದರ ಜತೆಗೆ ಅಂಗಡಿ, ಕಾಲೇಜು, ಪಂಚಾಯಿತಿಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಹೆಜ್ಜೆ ಹಾಕುತ್ತಿದ್ದಾರೆ.

ವಾಹನದಲ್ಲಿ ಹೋಗುವವರು ರಸ್ತೆಯ ಬದಿಗಳಲ್ಲಿ ತಂಪುಪಾನೀಯ, ನೀರಿನ ಬಾಟಲಿ, ಕುರುಕಲು ತಿಂಡಿಗಳ ಪ್ಯಾಕೆಟ್, ಡೈಪರ್ ಮತ್ತಿತರ ತ್ಯಾಜ್ಯಗಳನ್ನು ಎಸೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಭೂಮಿಯೊಳಗೆ ಅಥವಾ ಮಳೆ ನೀರಿನೊಂದಿಗೆ ಜಲಮೂಲ ಸೇರುವ ಈ ತ್ಯಾಜ್ಯಗಳು ಮುಂದಿನ ಪೀಳಿಗೆಗೆ ಅಪಾಯಕಾರಿಯಾಗಿ ಪರಿಣಮಿಸಲಿವೆ.

ಪಾದಯಾತ್ರೆಯಿಂದ ಪರಿವರ್ತನೆಯ ಪ್ರಯತ್ನ: ಸ್ವಚ್ಛ ದಂಡಯಾತ್ರೆಯನ್ನು ‘ಹೆಜ್ಜೆ ನನ್ನದು, ಹೊಣೆಗಾರಿಗೆ ನಮ್ಮದು’ ಎಂಬ ಧ್ಯೇಯದೊಂದಿಗೆ ನಡೆಸಲಾಗುತ್ತಿದೆ. ನಾಗರಾಜ್ ಬಜಾಲ್ ಫಲಕ ಹಿಡಿದು ರಸ್ತೆಯುದ್ದಕ್ಕೂ ಪಾದಯಾತ್ರೆ ಮಾಡಿ ಸಮಾಜದಲ್ಲಿ ಪರಿವರ್ತನೆಯಾಗಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ.

ಫಲಕ, ಗೋಣಿ ಚೀಲದೊಂದಿಗೆ ನಡಿಗೆ: ಕೊಡಗಿನ ಸಂಪಾಜೆಯಿಂದ ಮಂಗಳೂರಿನ ಪಡೀಲು ವರೆಗೆ ಏಕವ್ಯಕ್ತಿಯಾಗಿ ನಾಗರಾಜ್ ಬಜಾಲ್ ಗೋಣಿ ಚೀಲವನ್ನು ಕೈಯಲ್ಲಿ ಹಿಡಿದು ಮರುಬಳಕೆ ಮಾಡಬಹುದಾದ ಕಸವನ್ನು ಹೆಕ್ಕುತ್ತಾರೆ. ಗೋಣಿ ತುಂಬುತ್ತಿದ್ದಂತೆ ಹೆಸರು, ಮೊಬೈಲ್ ಸಂಖ್ಯೆ ಬರೆದು ರಸ್ತೆಯ ಬದಿಯಲ್ಲಿಟ್ಟು ಮುಂದೆ ಸಾಗುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ, ಸ್ಥಳೀಯಾಡಳಿತದ ಜತೆಗೆ ಒಪ್ಪಂದ ಮಾಡಿಕೊಂಡು ತ್ಯಾಜ್ಯ ನಿರ್ವಹಣೆಯ ಕಾರ್ಯವನ್ನೂ ನಿರ್ವಹಿಸುತ್ತಿದ್ದಾರೆ.

ಸ್ವಚ್ಛತೆಯ ಜತೆಗೆ ನಿರ್ವಹಣೆ ಅಗತ್ಯ: ಕಸವನ್ನು ಸ್ವಚ್ಛ ಮಾಡುವ ಜತೆಗೆ ನಿರ್ವಹಣೆಯ ಜವಾಬ್ದಾರಿಯೂ ಬಹು ಮುಖ್ಯವಾಗಿದೆ. ಕಸವನ್ನು ಹಸಿ, ಒಣ, ಅಪಾಯಕಾರಿ ಎಂದು ವಿಂಗಡಣೆ ಮಾಡಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲದಿದ್ದರೆ ವಿಲೇವಾರಿ ಘಟಕಗಳಲ್ಲಿ ಅವುಗಳ ನಿರ್ವಹಣೆ ಕಷ್ಟಕರವಾಗಿರುತ್ತದೆ. ಮನೆಯಲ್ಲಿ ಇದನ್ನು ಉತ್ತಮವಾಗಿ ವಿಂಗಡಿಸುವುದರಿಂದ ತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದೆಂಬ ಸಂದೇಶವನ್ನು ಸಾರುತ್ತಿದ್ದಾರೆ.

ಜಾಗೃತಿಗೆ ಹಸಿರು ನಡಿಗೆ

ಕಸದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷ ಕಾರವಾರದಿಂದ ಮಂಗಳೂರಿನ ತನಕ ನಾಗರಾಜ್ ಅವರು ಹಸಿರು ನಡಿಗೆಯನ್ನು ನಡೆಸಿದ್ದರು. ಈ ವರ್ಷ ಅ.೯ರಂದು ಕಲ್ಲುಗುಂಡಿಯಲ್ಲಿ ನಡಿಗೆ ಪ್ರಾರಂಭಿಸಿದ್ದು ದಿನಕ್ಕೆ ಸುಮಾರು ೧೦ ಕಿ.ಮೀ. ನಡೆಯುತ್ತಾರೆ. ಪಡೀಲ್ ತನಕ ಸಾಗುವ ಪಾದಯಾತ್ರೆಯಲ್ಲಿ ಸುಮಾರು ೧೦ ಟನ್‌ಗೂ ಅಽಕ ಕಸ ಸಂಗ್ರಹವಾಗಬಹುದು ಎನ್ನುವ ಅವರು, ಮುಂದಿನ ಶನಿವಾರ ಪಡೀಲು ತಲುಪುವ ಗುರಿಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ನಿರ್ವಹಣೆಯ ನಿಟ್ಟಿನಲ್ಲಿ ಒಣ ಕಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಲ್ಲುಗುಂಡಿ- ಪುತ್ತೂರು ನಡುವೆ ಸುಮಾರು ೮ ಪಂಚಾಯಿತಿ, ೭ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಜನರಲ್ಲಿ ತ್ಯಾಜ್ಯದ ಬಗ್ಗೆ ಕನಿಷ್ಠ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದು, ಹಳೆ ಬಟ್ಟೆಗಳನ್ನು ಬಳಸಿಕೊಂಡು ಬ್ಯಾಗ್ ತಯಾರಿಸುತ್ತಿದ್ದೇವೆ. ಇದರಿಂದ ೨೫ ಮಂದಿಗೆ ಉದ್ಯೋಗ ಸಿಕ್ಕಂತಾಗಿದೆ.
ನಾಗರಾಜ್ ಬಜಾಲ್, ಹಸಿರು ದಳದ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net