

ಬದಿಯಡ್ಕ: ಪಂಚಮವೇದವೆಂದೇ ಕರೆಯಲ್ಪಡುವ ಶಾಸ್ತ್ರೀಯ ಸಂಗೀತಕ್ಕೆ ಸಾವಿರಾರು ವರ್ಷಗಳ ಸುದೀರ್ ಪರಂಪರೆಯಿದ್ದು, ಅದು ತಲೆಮಾರಿನಿಂದ ತಲೆವಾರಿಗೆ ಯಾವುದೇ ಕಳಂಕವಿಲ್ಲದೆ ಹರಿದುಬರುತ್ತಿದೆ ಎಂದು ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳಿದರು.
ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಸಂಗೀತ ವಿದ್ವಾಂಸ ಯೋಗೀಶ್ ಶರ್ಮ ಬಳ್ಳಪದವು ರಚಿಸಿದ ಸಂಗೀತ ಪಾಠಮಾಲಿಕೆ ಪುಸ್ತಕದ ಪರಿಷ್ಕೃತ ನಾಲ್ಕನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶಾಸ್ತ್ರೀಯ ಸಂಗೀತದ ಆರಂಭಿಕ ಹಂತದ ಕಲಿಕೆಗೆ ಈ ಪುಸ್ತಕ ಉತ್ತಮ ಆಕರ ಗ್ರಂಥವಾಗಿದೆ. ಸಂಗೀತ ವಿದ್ಯಾರ್ಥಿಗಳಿಗೆ ಇಂತಹ ಪುಸ್ತಕಗಳು ಅತ್ಯಗತ್ಯ. ಪುಸ್ತಕದ ಪರಿಷ್ಕೃತ ನಾಲ್ಕನೇ ಮುದ್ರಣ ಬಿಡುಗಡೆಯಾಗಿರುವುದೇ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ವೀಣಾವಾದಿನಿ ಸಂಸ್ಥೆಯ ಹಿತೈಷಿ ಬೆಂಗಳೂರಿನ ಕುಡುಪುಳಿ ಸುಬ್ರಹ್ಮಣ್ಯ ಭಟ್, ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ, ಸಂಗೀತ ಪಾಠಮಾಲಿಕೆಯ ಲೇಖಕ ಯೋಗೀಶ್ ಶರ್ಮ ಬಳ್ಳಪದವು ಉಪಸ್ಥಿತರಿದ್ದರು. ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು ಶುಭಾಶಂಸನೆ ಮಾಡಿದರು. ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಗೌರವಿಸಲಾಯಿತು.
ವಿಜಯದಶಮಿಯ ಶುಭದಿನದಂದು ಸರಸ್ವತಿ ಪೂಜೆಯ ಬಳಿಕ ಸಂಗೀತ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಗೀತಾರಂಭ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳಾದ ಶೋಭನಾ ಯಮುರ್ಂಜ ಮತ್ತು ಆದ್ಯಾ ಪಿ. ಸಂಗೀತ ಕಛೇರಿ ನಡೆಸಿಕೊಟ್ಟರು. ಪ್ರಭಾಕರ ಕುಂಜಾರು ಹಾಗೂ ಜಗದೀಶ್ ಕೊರಕ್ಕಾನ (ವಯಲಿನ್), ಆಶ್ಲೇಷಾ ಪಿ.ಮತ್ತು ವಿಶ್ವಾಸ್ (ಮೃದಂಗ), ಪರಾಶರ ಶರ್ಮ ಯು. ಹಾಗೂ ವಿಶ್ರುತ್ ಬಿ. (ಘಟಂ) ಸಹಕರಿಸಿದರು.