ವಿಜಯವಾಣಿ ಸುದ್ದಿಜಾಲ ಮಂಗಳೂರು
ಝಲ್ ಝಲ್ ಕಾಲ್ಗೆಜ್ಜೆ ಕಲರವ, ಪುಟಾಣಿ ಮಕ್ಕಳ ನಗು, ಉತ್ಸಾಹ, ನಲಿದಾಟ, ನಡುನಡುವೆ ಅಳುವ ಕಂದಮ್ಮನ ಧ್ವನಿ, ಸಮಾಧಾನಪಡಿಸುವ ಅಮ್ಮಂದಿರ ಮೆಲುದನಿ ...
ವಿಜಯವಾಣಿ ಪತ್ರಿಕೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಹಾಂಗ್ಯೋ ಐಸ್‌ಕ್ರೀಂ, ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಆ್ಯಂಡ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಂಗಳವಾರ ಕೂಳೂರು ವಿಜಯವಾಣಿ ಕಚೇರಿಯಲ್ಲಿ ಜರುಗಿದಾಗ ಈ ಅಪೂರ್ವ ಸನ್ನಿವೇಶ ಸೃಷ್ಟಿಯಾಯಿತು.
ಉಜಿರೆ ರತ್ನ ಮಾನಸ ಜೀವನ ಶಿಕ್ಷಣ ವಸತಿ ನಿಲಯದ ನಿಲಯ ಪಾಲಕ ಯತೀಶ್ ಕೆ. ಬಳಂಜ ಮುಖ್ಯ ಅತಿಥಿಯಾಗಿ ಮಾತನಾಡಿ, ವಸ್ತುನಿಷ್ಠ, ಪಾರದರ್ಶಕ ವರದಿಗಳಿಂದ ವಿಜಯವಾಣಿ ನಂ.1 ಸ್ಥಾನದಲ್ಲಿದ್ದು, ಶ್ರೀ ಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜಿಸುವ ಮೂಲಕ ಪತ್ರಿಕೆ ಮತ್ತು ಓದುಗರ ನಡುವೆ ಬಾಂಧವ್ಯ ಬೆಸೆಯುವ ಕೆಲಸ ಮಾಡಿದೆ. ಮನೆ ಮನೆಗಳಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವಂತೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳಿಗೆ ಈ ಕ್ಷಣ ಜೀವನದುದ್ದಕ್ಕೂ ಸ್ಮರಣೀಯವಾಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಥಿಕವಾಗಿ ಹಿಂದುಳಿದವರನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ಶ್ರಮಿಸುತ್ತಿದ್ದು, ವಿಜಯವಾಣಿ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದರು.
ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಆ್ಯಂಡ್ ಡೈಮಂಡ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಶೇಟ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಜಯವಾಣಿ ಪ್ರತಿವರ್ಷ ಶ್ರೀ ಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜಿಸುವ ಮೂಲಕ ಧಾರ್ಮಿಕ ಸಂಸ್ಕೃತಿಯನ್ನು ಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿದೆ ಎಂದರು.
ಹಾಂಗ್ಯೋ ಸಂಸ್ಥೆಯ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ರಾಕೇಶ್ ಕಾಮತ್ ಇನ್ನೋರ್ವ ಅತಿಥಿಯಾಗಿದ್ದರು. ಮಕ್ಕಳು ದೇವರ ಸಮಾನ. ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭ ಮಕ್ಕಳಿಗೆ ವೇಷ ಹಾಕಿಸಿ ಅವರಲ್ಲಿ ಕೃಷ್ಣನನ್ನು ಕಾಣುವುದು ಪಾಲಕರಿಗೆ ಅಪೂರ್ವ ಸಂಭ್ರಮ. ಶ್ರೀ ಕೃಷ್ಣ ವೇಷ ಫೋಟೋ ಸ್ಪರ್ಧೆ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ತುಂಬಲು ಸ್ಫೂರ್ತಿಯಾಗಲಿದೆ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ಮಾದರಿಯಾಗಿದೆ ಎಂದರು.
ಸ್ಪರ್ಧೆಯ ತೀರ್ಪುಗಾರ ಹಿರಿಯ ಛಾಯಾಚಿತ್ರಗ್ರಾಹಕ ಮಂಜು ನೀರೆಶ್ವಾಲ್ಯ ಉಪಸ್ಥಿತರಿದ್ದು, ಸ್ಪರ್ಧೆಗೆ ಬಂದಿರುವ ಎಲ್ಲ ಫೋಟೊಗಳು ಉತ್ತಮವಾಗಿದ್ದವು. ಅದರಲ್ಲಿ ಅತ್ಯುತ್ತಮ ಫೋಟೊಗಳನ್ನು ಆಯ್ಕೆ ಮಾಡುವುದು ಸವಾಲಾಗಿತ್ತು ಎಂದು ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಾರಣರಾದ ಎಲ್ಲ ಪಾಲಕರಿಗೆ ಹಾಗೂ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ವಿಜಯವಾಣಿ ಪತ್ರಿಕೆಯ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್.ವಾಗ್ಳೆ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನವೀನ್ ಶೆಟ್ಟಿ, ಪ್ರಸರಣ ವಿಭಾಗದ ಸೂರಜ್ ಪೈ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಉಪಸಂಪಾದಕ ಉಮೇಶ್ ಕೋಟ್ಯಾನ್ ನಿರೂಪಿಸಿದರು. ಉಪಸಂಪಾದಕ ಸಂದೀಪ್ ನರಿಂಗಾನ ವಂದಿಸಿದರು.