

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಪೆರ್ನೆ ಎಚ್.ಎಂ.ಹಾಲ್ ಮುಂಭಾಗದ ಯು ಟರ್ನ್ನಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ವೃದ್ಧರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಬೈಕ್ ಸವಾರ ತಣ್ಣೀರುಪಂಥ ಗ್ರಾಮದ ತುರ್ಕಳಿಕೆ ನಿವಾಸಿ ಅಬ್ದುಲ್ ಖಾದರ್(70) ಮೃತಪಟ್ಟವರು. ಕಾರಿನಲ್ಲಿದ್ದ ಬೆಂಗಳೂರು ವಿಜಯನಗರ ನಿವಾಸಿ ನರಸಿಂಹ ಭಟ್ ಮತ್ತು ಅವರ ಪತ್ನಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಬ್ದುಲ್ ಖಾದರ್ ಮದುವೆಗೆ ಹೋಗುವ ಸಲುವಾಗಿ ಬಂದಿದ್ದು ರಸ್ತೆಯ ಇನ್ನೊಂದು ಬದಿಗೆ ಹೋಗುತ್ತಿದ್ದ ಸಂದರ್ಭ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಡಿಕೆ ತೋಟ ನಿರ್ವಹಣೆಯ ಗುತ್ತಿಗೆದಾರರಾಗಿದ್ದು, ತುರ್ಕಳಿಕೆ, ಕಲ್ಲೇರಿ, ಕರಾಯ, ತೆಕ್ಕಾರು ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಪತ್ನಿ, ಮೂವರು ಪುತ್ರರು, ಈರ್ವರು ಪುತ್ರಿಯರಿದ್ದಾರೆ. ಕಾರಿನಲ್ಲಿದ್ದವರು ಮೂಲತಃ ಉಡುಪಿಯವರಾಗಿದ್ದು, ಕಾರ್ಕಳದಲ್ಲಿ ನಡೆದ ದೀಪೋತ್ಸವಕ್ಕೆ ಬಂದವರು ಮರಳಿ ಬೆಂಗಳೂರು ಹೋಗುತ್ತಿದ್ದರು. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.