

ಮಂಗಳೂರು: ಚುನಾವಣಾಧಿಕಾರಿಗಳಿಗೆ ಎಸ್‌ಐಆರ್ ಫಾರಂ ನಂ.7 ಸಲ್ಲಿಸುವ ಮೂಲಕ ಜಿಲ್ಲೆಯ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಇದು ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿಯುವ ಹುನ್ನಾರ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ಕಡೆ ಎಫ್‌ಐಆರ್ ದಾಖಲಾಗಿದೆ ಎಂದವರು ಹೇಳಿದರು.
ರಾಜ್ಯವನ್ನು ಆಳ್ವಿಕೆ ಮಾಡಿದವರು ಪೊಲೀಸ್ ಠಾಣೆಗೆ ನುಗ್ಗುವ ಹೇಳಿಕೆ ನೀಡುತ್ತಿದ್ದಾರೆ. ನೀವು ಮಾಡುತ್ತಿರುವ ಕೆಲಸ ನೈತಿಕವಾಗಿದೆಯೇ? ಕೇಂದ್ರ ಸರ್ಕಾರ ಅಣತಿಯಂತೆ ಸಂಸದರು, ಮುಖಂಡರು ಈ ಕೃತ್ಯದಲ್ಲಿ ಕೈ ಜೋಡಿಸಿದ್ದಾರೆ. ನಿಮ್ಮ ಮನಸ್ಥಿತಿಯನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಕಾವೂರು ಪೊಲೀಸ್ ಠಾಣೆಯಲ್ಲಿ 2 ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಕಿಶನ್ ಎಂಬವರು 45 ಜನರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡಲು ಕಳುಹಿಸಿದ್ದಾರೆ. ರಿತೇಶ್ 9, ಯುವರಾಜ್ 10 ಹಾಗೂ ಶಶಿಕಲಾ 4 ಅರ್ಹ ಮತದಾರರನ್ನು ರದ್ದು ಮಾಡಲು ಚುನಾವಣಾಧಿಕಾರಿಯವರಿಗೆ ಫಾರಂ ನಂ.7 ಕಳುಹಿಸಿದ್ದಾರೆ. ಸಂತ್ರಸ್ತರೇ ದೂರು ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ನೈಜ ಮತದಾರರ ಒಂದು ಹೆಸರು ಕೂಡಾ ಪಟ್ಟಿಯಿಂದ ರದ್ದಾಗದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸುತ್ತಿದೆ. ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ ನಿಗಾ ಇಡಲಾಗಿದೆ. ಬಿಜೆಪಿ ಕವರಿಂಗ್ ಲೆಟರ್‌ನಲ್ಲೇ ಇಂತಹ ನಕಲಿ ಫಾರಂ 7 ನಮೂನೆಗಳನ್ನು ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದವರು ಹೇಳಿದರು.
ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಅಶೋಕ್ ಡಿ.ಕೆ., ನೀರಜ್ ಪಾಲ್, ಮನುರಾಜ್, ಟಿ.ಕೆ.ಸುಧೀರ್, ಲಾರೆನ್ಸ್, ಉದಯ ಕುಂದರ್, ಭಾಸ್ಕರ್, ನಜೀರ್ ಬಜಾಲ್ ಮೊದಲಾದವರಿದ್ದರು.