ರಂಗಸ್ಥಳದಲ್ಲಿ ಇನ್ನು ಯಕ್ಷಗಾನ ರಸದೌತಣ: ಕಲಾಯಾನಕ್ಕೆ ಮೇಳಗಳು ಸಜ್ಜು

ಡಿ.3ರಿಂದ ಕಟೀಲಿನ ಏಳೂ ಮೇಳಗಳ ದಿಗ್ವಿಜಯ ಆರಂಭ
ಯಕ್ಷಗಾನ
ಯಕ್ಷಗಾನ
Published on: 

ರಾಜೇಶ್ ಶೆಟ್ಟಿ ದೋಟ ಮಂಗಳೂರು

ಕರಾವಳಿಯಲ್ಲಿ ಈ ಬಾರಿಯ ಯಕ್ಷಪಯಣಕ್ಕೆ ಮುನ್ನುಡಿ ಬರೆಯಲಾಗಿದೆ. ಇನ್ನು ಆರು ತಿಂಗಳು ನಾಡಿನೆಲ್ಲೆಡೆ ಚೆಂಡೆ, ಮದ್ದಳೆಗಳ ಸದ್ದು ಮಾರ್ದನಿಸಲಿದ್ದು, ಯಕ್ಷಲೋಕ ಅನಾವರಣಗೊಳ್ಳಲಿದೆ. ಬಡಗುತಿಟ್ಟಿನ ಕೆಲ ಮೇಳಗಳು ಈಗಾಗಲೇ ಕಲಾಯಾನ ಆರಂಭಿಸಿದ್ದು, ಕೆಲವೇ ದಿನದಲ್ಲಿ ಬಹುತೇಕ ಎಲ್ಲ ಮೇಳಗಳು ರಂಗಸ್ಥಳದಲ್ಲಿ ಮೇಳೈಸಲಿವೆ.

ತೆಂಕು-ಬಡಗಿನ ಸುಮಾರು 45 ಮೇಳಗಳ ಕಲಾವಿದರು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಎಲ್ಲ ಮೇಳಗಳೂ ಕಾಲಮಿತಿ ಪ್ರದರ್ಶನಕ್ಕೆ ಆದ್ಯತೆ ನೀಡಿದ್ದು, ಆಯೋಜಕರ ಅಪೇಕ್ಷೆ ಮೇರೆಗೆ ಪೂರ್ಣರಾತ್ರಿ ಪ್ರದರ್ಶನವನ್ನೂ ನೀಡಲಿದೆ. ಕಟೀಲಿನ ಏಳೂ ಮೇಳಗಳು ಡಿ.3ರಂದು ದಿಗ್ವಿಜಯ ಆರಂಭಿಸಲಿದೆ. ಧರ್ಮಸ್ಥಳ ಮೇಳ ನ.12ರಂದು ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.29ರಂದು ತಿರುಗಾಟಕ್ಕೆ ಚಾಲನೆ ನೀಡಲಿದೆ. ಈ ಬಾರಿ ಉಭಯ ತಿಟ್ಟಿನಲ್ಲಿ ಎರಡು ಹೊಸ ಮೇಳಗಳು ತಿರುಗಾಟ ನಡೆಸಲಿವೆ.

ದಿಗ್ವಿಜಯದಲ್ಲಿ ಮೇಳಗಳು

ಬಡಗುತಿಟ್ಟಿನ ಕಮಲಶಿಲೆ ಮೇಳ ನ.10ರಂದು ತಿರುಗಾಟ ಆರಂಭಿಸಿದೆ. ಸಾಲಿಗ್ರಾಮ ಮೇಳ 12ಕ್ಕೆ ಹೊರಟಿದ್ದು, ಕನಿಷ್ಕ್ ಹೆಗ್ಡೆ ಕತೆ, ಬೇಳೂರು ವಿಷ್ಣುಮೂರ್ತಿ ನಾಯಕ್ ಪದ್ಯ ರಚನೆಯ ‘ಹರಿ ಓಂ’, ರಮೇಶ್ ಬೇಗಾರ್ ರಚಿತ ‘ಕೃತ್ತಿಕಾ ನಕ್ಷತ್ರ’ ಪ್ರಸಂಗಗಳನ್ನು ಪ್ರದರ್ಶಿಸುತ್ತಿದೆ. ಹಟ್ಟಿಯಂಗಡಿ ಮೇಳ 13ಕ್ಕೆ ತಿರುಗಾಟ ಆರಂಭಿಸಿದ್ದು, ದಿನೇಶ್ ಸುವರ್ಣ ಕೊಡವೂರು ರಚನೆಯ ‘ಬೆಳದಿಂಗಳ ಚೆಲುವೆ’, ಪಿ.ವಿ.ಆನಂದ ಸಾಲಿಗ್ರಾಮ ಅವರ ‘ಶಕ್ತಿ ಸ್ವರೂಪಿಣಿ ಶ್ರೀ ವನದುರ್ಗೆ’, ಮನೋಜ್ ಕುಮಾರ್ ಅವರ ‘ಕರ್ಣ ರಂಜಿನಿ’ ನೂತನ ಕಥಾನಕ. ಮಡಾಮಕ್ಕಿ ಮೇಳ 15ರಂದು ಹೊರಟಿದ್ದು, ಅಂಬಿಕಾ ಪೂಜಾರಿ ವಕ್ವಾಡಿ ವಿರಚಿತ ಗುಪ್ತಗಾಮಿನಿ ಪ್ರದರ್ಶಿಸುತ್ತಿದೆ. ಮಾರಣಕಟ್ಟೆಯ ಮೂರು, ಮಂದಾರ್ತಿಯ ಐದೂ ಮೇಳಗಳು, ಕೋಟ ಅಮೃತೇಶ್ವರಿ ಮೇಳ 18ರಂದು ಕಲಾಯಾನ ಆರಂಭಿಸಿದೆ. ಕೋಟ ಮೇಳದಲ್ಲಿ ರಜತ್ ಪೂಜಾರಿ ತೆಕ್ಕಟ್ಟೆ ಕತೆ, ಪಿ.ವಿ.ಆನಂದ ಸಾಲಿಗ್ರಾಮ ಪದ್ಯ ರಚನೆಯ ‘ಅಹಂ ಪ್ರೇಮಾಸ್ಮಿ’ ಸಾಮಾಜಿಕ ಪ್ರಸಂಗವಿದೆ.

ನೂತನ ಪ್ರಸಂಗಗಳು

ತೆಂಕುತಿಟ್ಟಿನ ಹನುಮಗಿರಿ ಮೇಳ ನ.28ರಂದು ತಿರುಗಾಟ ಆರಂಭಿಸಲಿದ್ದು, ವಾಸುದೇವ ರಂಗಾಭಟ್ ಕಥಾ ಸಂಯೋಜನೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಪದ್ಯ ರಚನೆಯ ‘ವಿಧಿ ವಿಲಾಸ’ ನೂತನ ಪ್ರಸಂಗ. ಪಾವಂಜೆ ಮೇಳ 21ರಂದು 7ನೇ ವರ್ಷದ ತಿರುಗಾಟಕ್ಕೆ ಮುನ್ನುಡಿ ಇಡಲಿದೆ. ಪ್ರೊ.ಪವನ್ ಕಿರಣಕೆರೆ ರಚನೆಯ ‘ಲಗ್ನಪತ್ರಿಕೆ’, ‘ಮೋಹ ಮಾಧವಿ’ ಆಖ್ಯಾನ. 21ರಂದು ಗೆಜ್ಜೆಗಿರಿ ಮೇಳ ಹೊರಡಲಿದ್ದು, ‘ಸಿಂಧೂರ’, ‘ನಾಗರತಿ’, ‘ಪುಂಚದ ಮಣ್ಣ್’, ‘ಘೋರ ಭೈರವಿ’ ಪ್ರದರ್ಶಿಸಲಿದೆ. 22ರಂದು ಬಪ್ಪನಾಡು ಮೇಳ ಕಲಾಯಾನ ಆರಂಭಿಸಲಿದ್ದು, ಡಾ.ತಾರಾನಾಥ ಬಲ್ಯಾಯ ರಚನೆಯ ‘ಬಪ್ಪನಾಡು ಪಂಚದುರ್ಗಾಪರಮೇಶ್ವರಿ ಮಹಾತ್ಮೆ’, ಡಿ.ಮನೋಹರ್ ಕುಮಾರ್ ಅವರ ‘ಬಾನದ ಭಾಗ್ಯವಂತೆದಿ’ ಸಹಿತ ‘ಬೂಡುದ ಬಲ್ಯಾಯೆ’, ‘ಪುಂಚದ ಪೂ ಮಾಲೆ’, ‘ಮಹಿಮೆದ ಮಹಾಕಾಳಿ’, ‘ಬ್ರಹ್ಮ ಕಲಶಾಭಿಷೇಕ’ ಪ್ರಸಂಗಗಳಿವೆ. ಸುಂಕದಕಟ್ಟೆ ಮೇಳದ ತಿರುಗಾಟಕ್ಕೆ 27ಕ್ಕೆ ಚಾಲನೆ ದೊರೆಯಲಿದೆ. ಕಳವಾರು ಬೆಂಕಿನಾಥೇಶ್ವರ ಮೇಳಕ್ಕೆ ಡಿ.2ಕ್ಕೆ ಆರಂಭ ಸಂಭ್ರಮ. ಶುಭಾಶಯ ಜೈನ್ ರಚಿತ ‘ಗೆಜ್ಜೆ ಕತ್ತಿ’, ವಿಜಿತ್ ಶೆಟ್ಟಿ ಆಕಾಶಭವನ ಅವರ ‘ಶುಭ ಮುಹೂರ್ತ’ ಜತೆಗೆ ‘ಶ್ವೇತ ಪೌರ್ಣಮಿ’, ‘ಧರ್ಮ ಚಾವಡಿ’, ‘ಶ್ರೀದೇವಿ ವಾರಾಹಿ ಪರಮೇಶ್ವರಿ’ ಪ್ರಸಂಗಗಳನ್ನು ಪ್ರದರ್ಶಿಸಲಿದೆ. ಕುಕ್ಕೆ ಸುಬ್ರಹ್ಮಣ್ಯ ಮೇಳ ಡಿ.3ರಂದು ತಿರುಗಾಟ ಆರಂಭಿಸಲಿದೆ.

ಬಡಗು ತಿಟ್ಟಿನ ಕಲಾಯಾನ

ಬಡಗುತಿಟ್ಟಿನ ಪೆರ್ಡೂರು ಮೇಳ ನ.20ಕ್ಕೆ ಹೊರಡಲಿದ್ದು, ಪ್ರೊ.ಪವನ್ ಕಿರಣಕೆರೆ ರಚನೆಯ ‘ಲಗ್ನ ಪತ್ರಿಕೆ’ ಹೊಸ ಪ್ರಸಂಗ. ಅಂದೇ ಮೆಕ್ಕೆಕಟ್ಟು ಕಲಾಯಾನ ಆರಂಭಿಸಲಿದೆ. ಸೌಕೂರು ಮೇಳವೂ 20ಕ್ಕೆ ಹೊರಡಲಿದ್ದು, ಕನಿಷ್ಕ್ ಹೆಗ್ಡೆ ಬಾಳದಗುತ್ತು ಕತೆ, ಹೇರಂಜಾಲು ಗೋಪಾಲ ಗಾಣಿಗ ಪದ್ಯ ರಚನೆಯ ‘ಬ್ರಹ್ಮಾಸ್ತ್ರ’ ಪ್ರದರ್ಶನಗೊಳ್ಳಲಿದೆ. ಗೋಳಿಗರಡಿ ಮೇಳ 22ರಂದು ತಿರುಗಾಟ ಆರಂಭಿಸಲಿದ್ದು, ಕೌಲಾಳಿ ಚಂದ್ರಶೇಖರ ಶೆಟ್ಟಿ ರಚನೆಯ ‘ಪ್ರಣಯ ಕಾದಂಬರಿ’ ಜತೆಗೆ ‘ಮಹಾಶಕ್ತಿ ಆದಿಶಕ್ತಿ’, ‘ಕಾಂಚನ ಗಂಗಾ’, ‘ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ’ ಪ್ರಸಂಗಗಳನ್ನು ಪ್ರದರ್ಶಿಸಲಿದೆ. ಹಾಲಾಡಿ ಮೇಳ 26ಕ್ಕೆ ರಂಗವೇರಲಿದ್ದು, ಪವನ್ ಕಿರಣಕೆರೆ ರಚಿತ ‘ಗೌರಿ ಮನೋಹರಿ’ ಪ್ರದರ್ಶಿಸಲಿದೆ. ಸಿಗಂದೂರು ಮೇಳ 29ಕ್ಕೆ ಹೊರಡಲಿದ್ದು, ನಂದೀಶ್ ಶೆಟ್ಟಿ ಬಿಲ್ಲಾಡಿ ರಚನೆಯ ‘ಅಗ್ನಿ ಶರಧಿ’ ಪ್ರದರ್ಶಿಸಲಿದೆ. ವತ್ತಿನಕಟ್ಟೆ ಮೇಳ ‘ಮಹಾಸತಿ ಕ್ಷೇತ್ರ ಮಹಾತ್ಮೆ’, ‘ನವಿಲೂರ ನಾಗವೇಣಿ’, ‘ಪ್ರಣಯಪಕ್ಷಿ’, ‘ಸ್ವಾಮಿ ಬ್ರಹ್ಮಲಿಂಗೇಶ್ವರ’ ಪ್ರದರ್ಶಿಸಲಿದೆ. ಅಂದೇ ಸಿಗಂದೂರು ಮೇಳವೂ ಕಲಾಯಾನ ಆರಂಭಿಸಲಿದೆ.

ಎರಡು ನೂತನ ಮೇಳಗಳು

ತೆಂಕುತಿಟ್ಟಿನಲ್ಲಿ ಶ್ರೀ ಅನ್ನಪೂರ್ಣೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿ ಬನ್ನೂರು ಪುತ್ತೂರು ಹಾಗೂ ಬಡಗಿನಲ್ಲಿ ಶ್ರೀ ಆದಿಮಾಯೆ ಮೂಕಾಂಬಿಕಾ ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ ಕುಕ್ಕೆಹಳ್ಳಿ ಎಂಬ ಎರಡು ಹೊಸ ಮೇಳಗಳು ಆರಂಭಗೊಂಡಿವೆ. ಚಿಕ್ಕಮೇಳವಾಗಿದ್ದ ಪುತ್ತೂರು ಮೇಳ ಪೂರ್ಣಪ್ರಮಾಣದಲ್ಲಿ ಡಿ.17ಕ್ಕೆ ಹೊರಡಲಿದ್ದು, ‘ಉಬರ್ ಕಡಪುದ ಬೀರೆಕಲ್ಲುಡೆ’, ‘ಕೋಟಿ ಚೆನ್ನಯ’, ‘ತುಳುನಾಡ ಸಿರಿ’, ‘ದೇವುಪೂಂಜ ಪ್ರತಾಪ’ ಮೊದಲಾದ ತುಳು ಹಾಗೂ ‘ಮಾಯಾಮೃಗ’, ‘ಸೀತಾ ಪರಿತ್ಯಾಗ’ ಸಹಿತ ಪೌರಾಣಿಕ ಪ್ರಸಂಗ ಪ್ರದರ್ಶಿಸಲಿದೆ. ಕುಕ್ಕೆಹಳ್ಳಿ ಮೇಳ ನ.11ರಂದು ತಿರುಗಾಟ ಆರಂಭಿಸಿದ್ದು, ದೇವದಾಸ್ ಈಶ್ವರಮಂಗಲ ವಿರಚಿತ ‘ವೈಭವ ಸೂರ್ಯವಂಶಿ’, ಸಿ.ಕೆ.ಪ್ರಶಾಂತ್ ವಿರಚಿತ ‘ಮಾಯೆಯ ಅಜ್ಜ’ ಜತೆಗೆ ‘ಕುಕ್ಕೆಹಳ್ಳಿ ಆದಿಮಾಯೆ ಸ್ವಾಮಿ ಕೊರಗಜ್ಜ ಕ್ಷೇತ್ರ ಮಹಾತ್ಮೆ’, ಮಂದಾರ್ತಿ ಕ್ಷೇತ್ರ ಮಹಾತ್ಮೆ’, ‘ನಾಗಪ್ರತಿಷ್ಠೆ’, ‘ಪವಿತ್ರ ಹೃದಯ’ ಪ್ರಸಂಗಗಳನ್ನು ಪ್ರದರ್ಶಿಸುತ್ತಿದೆ.

ತಿರುಗಾಟದಲ್ಲಿ ಮಹಿಳೆಯರು

ಈ ಬಾರಿ ಮೇಳದಲ್ಲಿ ಮಹಿಳಾ ಕಲಾವಿದರು ತಿರುಗಾಟ ನಡೆಸಲಿರುವುದು ವಿಶೇಷ. ಪುತ್ತೂರು ಮೇಳದಲ್ಲಿ ಶ್ರೀಶಾವಾಸವಿ ತುಳುನಾಡ್, ಪೂರ್ವಿ ಗೌಡ ಪೋಳ್ಯ ಕಲಾವಿದರಾಗಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೇಳದಲ್ಲಿ ಹೇಮಸ್ವಾತಿ ಕುರಿಯಾಜೆ ಭಾಗವತರಾಗಿದ್ದಾರೆ. ಶುಭಾಶಯ ಜೈನ್, ಅಂಬಿಕಾ ಪೂಜಾರಿ ವಕ್ವಾಡಿ ರಚಿತ ಕಲಾಕೃತಿಗಳು ರಂಗದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಹವ್ಯಾಸಿ ಕಲಾವಿದೆಯಾಗಿ ಯಕ್ಷಗಾನ ಹಾಗೂ ತಾಳಮದ್ದಳೆಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಇದೀಗ ಮೇಳದಲ್ಲಿ ಅವಕಾಶ ಸಿಕ್ಕಿದೆ. ಸಮಯ ಹೊಂದಾಣಿಕೆ ಸವಾಲು. ಆರಂಭದಲ್ಲಿ ಮೇಳಕ್ಕೆ ಸೀಮಿತ ಆಟಗಳಿರುವುದರಿಂದ ಅಷ್ಟೇನೂ ಸಮಸ್ಯೆಯಾಗದು. ಮೇಳದ ಇತರ ಕಲಾವಿದರ ಪೂರ್ಣ ಸಹಕಾರವಿದೆ. ಕಲಾವಿದೆಯಾಗಿ ಪಕ್ವಗೊಳ್ಳುವ ಹಾಗೂ ಪ್ರಸಂಗ ರಚನೆಯ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಲಾಯಾನ ಪೂರಕವಾಗುವ ನಿರೀಕ್ಷೆಯಿದೆ.
ಶ್ರೀಶಾವಾಸವಿ ತುಳುನಾಡ್, ಕಲಾವಿದೆ, ಪುತ್ತೂರು ಮೇಳ