

ಗಂಗಾಧರ ಕಲ್ಲಪಳ್ಳಿ ಸುಳ್ಯ
ದೇಶೀಯ ಗೋ ಸಂಪತ್ತಾದ ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಭಿಯಾನವೊಂದು ರಾಜ್ಯದ ಸಾವಯವ ಕೃಷಿ ಕ್ಷೇತ್ರದಲ್ಲಿ ಮೌನ ಕ್ರಾಂತಿ ಮಾಡುತ್ತಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ನೀರುಡೇಲುವಿನ ಕೃಷಿಕ, ಗೋಪ್ರೇಮಿ ಅಕ್ಷಯ್ ಆಳ್ವ ನೇತೃತ್ವದಲ್ಲಿ ಐದು ವರ್ಷಗಳಿಂದ ನಡೆಯುತ್ತಿರುವ ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಮೂಲಕ ರಾಜ್ಯಾದ್ಯಂತ 5 ಸಾವಿರಕ್ಕೂ ಅಧಿಕ ಜೋಡಿ ಮಲೆನಾಡು ಗಿಡ್ಡ ತಳಿ ಅಂದರೆ 10 ಸಾವಿರಕ್ಕೂ ಅಧಿಕ ಗೋವುಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಈ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯಗಳ ಮನೆಮನೆಗಳಲ್ಲಿ ಮಲೆನಾಡು ಗಿಡ್ಡ ಗೋವುಗಳ ಅಂಬಾ ಕರೆ ಅನುರಣಿಸಿದೆ.
ಹಿಂದೆ ಅಕ್ಷಯ್ ಆಳ್ವ ಮನೆಯಲ್ಲಿ ಜರ್ಸಿ, ಹೆಚ್ಎಫ್ ತಳಿ ದನಗಳು ಇದ್ದವು. ಮೇವು ಮತ್ತಿತರ ನಿರ್ವಹಣೆ ಕಷ್ಟವಾದಾಗ ಸಾಕುವುದು ಕಷ್ಟವೆನಿಸಿತು. ಆಗ ಮಲೆನಾಡು ಗಿಡ್ಡ ಗೋವುಗಳನ್ನು ಸಾಕುವುದರತ್ತ ಆಕರ್ಷಿತರಾದರು. ಜತೆಗೆ ಸಮಾನ ಮನಸ್ಕರಲ್ಲಿ ಮಳೆನಾಡು ಗಿಡ್ಡ ತಳಿ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಚರ್ಚಿಸಿ ಅಭಿಯಾನ ಆರಂಭಿಸಿದರು.
ವಿವಿಧ ಕೃಷಿಕರು, ಗೋಸಾಕಣೆ ಮಾಡುವವರಲ್ಲಿ ಇರುವ ಹೆಚ್ಚುವರಿ ಮಲೆನಾಡು ಗಿಡ್ಡ ತಳಿಯ ಕರುಗಳನ್ನು ಪಡೆದು ಸಾಕಲು ಆಸಕ್ತಿ ಇರುವ ಕೃಷಿಕರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಕರುವನ್ನು ಉಚಿತವಾಗಿ ನೀಡಲು ಆರಂಭಿಸಿದರು. ಸಮಾನ ಮನಸ್ಕರು, ಸಾವಯವ ಕೃಷಿಕರು, ಗೋಪ್ರೇಮಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದರು. ವಿವಿಧ ಮಠಗಳ ಸ್ವಾಮೀಜಿಗಳು ಪ್ರೋತ್ಸಾಹ ನೀಡಿದರು. ಇದರಿಂದ ಅಭಿಯಾನ ರಾಜ್ಯಾದ್ಯಂತ ಪ್ರಚಾರ ಪಡೆಯಿತು.
ರಾಘವೇಶ್ವರ ಭಾರತೀ ಸ್ವಾಮಿಗಳ ಭಕ್ತ ವೃಂದ, ವಿವಿಧ ಸಂಘಟನೆಗಳು, ಸಾವಯವ ಕೃಷಿಕರು, ಗೋಶಾಲೆಗಳು, ಸಾಮಾನ್ಯ ರೈತರು ಅಭಿಯಾನ ತಂಡಕ್ಕೆ ಮಲೆನಾಡ ಗಿಡ್ಡ ಕರುಗಳನ್ನು ನೀಡ ತೊಡಗಿದರು. ನೂರಾರು ಮಂದಿ ಕೃಷಿಕರು, ಗೋಪ್ರೇಮಿಗಳು ಮಲೆನಾಡು ಗಿಡ್ಡ ಸಾಕಲು ಆಸಕ್ತಿ ವಹಿಸಿ ಮುಂದೆ ಬಂದರು. ಈ ಮೂಲಕ ಮನೆಮನೆಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಹಾಲು, ಹಾಲುತ್ಪನ್ನಗಳ ತಯಾರಿಕೆಗೆ ಸಾವಯವ ಕೃಷಿ ನಡೆಸಲು ಮುನ್ನುಡಿ ಬರೆಯಿತು.
ಮಲೆನಾಡು ಗಿಡ್ಡ ಗೋವನ್ನು ಸಾಕಲು ಆಸಕ್ತಿ ಇರುವವರಿಗೆ ಒಂದು ಹೆಣ್ಣು ಮತ್ತು ಗಂಡು ಗೋವನ್ನು ಉಚಿತವಾಗಿ ಅಭಿಯಾನದ ಮೂಲಕ ನೀಡಲಾಗುತ್ತದೆ. ಅದನ್ನು ಅವರು ಸಾಕಿ ಸಂವರ್ಧನೆ ಮಾಡಿ ಎಷ್ಟು ಗೋವನ್ನು ಬೇಕಾದರೂ ಬೆಳೆಸಬಹುದು. ಆದರೆ ಪಡೆದ ಗೋವನ್ನು ಮಾರಾಟ ಮಾಡುವಂತಿಲ್ಲ. ಸಾಕಲು ಕಷ್ಟವಾದರೆ ಅಭಿಯಾನ ತಂಡಕ್ಕೆ ಹಿಂತಿರುಗಿಸಬಹುದು.
ಅಕ್ಷಯ್ ಆಳ್ವರ ಹಟ್ಟಿಯಲ್ಲಿ 35 ಮಲೆನಾಡು ಗಿಡ್ಡ ತಳಿಯ ಗೋವುಗಳಿವೆ. ಅವರಿಗೆ ಅಭಿಯಾನದಲ್ಲಿ ಗಂಡು ಕರುಗಳು ಹೆಚ್ಚು ಬರತೊಡಗಿದಾಗ ಜೋಡೆತ್ತು ಅಭಿಯಾನ ಆರಂಭಿಸಿದರು. ಸಣ್ಣ ಮತ್ತು ಮಧ್ಯಮ ಕೃಷಿಕರಿಗೆ ಉಳುಮೆ ಮಾಡಲು ಸಹಕಾರಿಯಾಗಲು ಜೋಡೆತ್ತು ಆಭಿಯಾನ ನೆರವಾಯಿತು. ವಿವಿಧ ಭಾಗಗಳಲ್ಲಿ 300ಕ್ಕೂ ಅಧಿಕ ಜೋಡಿ ಎತ್ತುಗಳನ್ನು ಉಚಿತವಾಗಿ ವಿತರಿಸಲಾಗಿದೆ.