ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಾದರಿ

ಅಭಿನಂದನಾ ಕೃತಿ ಬಿಡುಗಡೆ
 ನೊಚ್ಚ ಪ್ರಕಾಶ್ ಶೆಟ್ಟಿ ಹಾಗೂ ಪತ್ನಿ ಪ್ರವೀಣ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಕೆ.ಎನ್. ವಿಜಯಪ್ರಕಾಶ, ಡಾ.ಬಿ.ಎ.ಕುಮಾರ ಹೆಗ್ಡೆ, ಶರತ್‌ಕೃಷ್ಣ ಪಡುವೆಟ್ನಾಯ ಮೊದಲಾದವರು ಉಪಸ್ಥಿತರಿದ್ದರು.
ನೊಚ್ಚ ಪ್ರಕಾಶ್ ಶೆಟ್ಟಿ ಹಾಗೂ ಪತ್ನಿ ಪ್ರವೀಣ ದಂಪತಿಯನ್ನು ಸನ್ಮಾನಿಸಲಾಯಿತು. ಡಾ.ಕೆ.ಎನ್. ವಿಜಯಪ್ರಕಾಶ, ಡಾ.ಬಿ.ಎ.ಕುಮಾರ ಹೆಗ್ಡೆ, ಶರತ್‌ಕೃಷ್ಣ ಪಡುವೆಟ್ನಾಯ ಮೊದಲಾದವರು ಉಪಸ್ಥಿತರಿದ್ದರು.
Published on: 

ಬೆಳ್ತಂಗಡಿ: ಸರ್ಕಾರಿ ಅಧಿಕಾರಿಗಳಿಗೆ ನಾಲ್ಕು ಗೋಡೆಗಳ ನಡುವೆ ಸಣ್ಣ ಪ್ರಮಾಣದಲ್ಲಿ ಬೀಳ್ಕೊಡುಗೆ ನಡೆಯುತ್ತದೆ. ಆದರೆ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ಭವ್ಯ ವೇದಿಕೆಯಲ್ಲಿ ನಡೆದಿರುವ ಅಭಿವಂದನಾ ಕಾರ್ಯಕ್ರಮ ಅವರ ಸೇವಾ ಸಾಧನೆಗೆ ಸಾಕ್ಷಿಯಾಗಿದೆ. ಅವರ ಸೇವಾ ಕಾರ್ಯ ರಾಜ್ಯದ ಎಲ್ಲ ಪಿಡಿಒಗಳಿಗೆ ಮಾದರಿ ಎಂದು ವಿಧಾನಸಭೆ ಉಪಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ ಹೇಳಿದರು.

ಉಜಿರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ಉಜಿರೆ ನಾಗರಿಕರು ಹಾಗೂ ನೊಚ್ಚ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಬುಧವಾರ ಉಜಿರೆಯಲ್ಲಿ ಆಯೋಜಿಸಿದ್ದ ಪ್ರಕಾಶಾಭಿವಂದನಂ ಕಾರ್ಯಕ್ರಮದಲ್ಲಿ ಪ್ರಕಾಶ ಪರ್ವ ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಕಾಶ್ ಶೆಟ್ಟಿ ತಾವು ಪಿಡಿಒ ಆಗಿದ್ದ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ, ಘನತ್ಯಾಜ್ಯ ಘಟಕ ಸೇರಿದಂತೆ ಹಲವು ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದರು. ಇದರಿಂದಾಗಿ ಜಿಲ್ಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸುವಂತಾಯಿತು. ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿಸಿದ ಕೀರ್ತಿ ಅವರದ್ದು. ಸೇವಾಮನೋಭಾವ ಮತ್ತು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದ ಅವರು ಧ್ವನಿಯಿಲ್ಲದವರ ಧ್ವನಿಯಾಗಿ ಗುರುತಿಸಿಕೊಂಡಿದ್ದರು ಎಂದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರು ಪ್ರಶಸ್ತಿ-ಪುರಸ್ಕಾರಕ್ಕಾಗಿ ಕೆಲಸ ಮಾಡಲಿಲ್ಲ. ಸ್ವಚ್ಛತೆಗೆ ಆದ್ಯತೆ ನೀಡಿ ಉಜಿರೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಮಾತ್ರವಲ್ಲದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು ಎಂದರು.

ನೊಚ್ಚ ಪ್ರಕಾಶ್ ಶೆಟ್ಟಿ ಹಾಗೂ ಪತ್ನಿ ಪ್ರವೀಣಾ ದಂಪತಿಯನ್ನು ಸನ್ಮಾನಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಪ್ರಕಾಶ್ ಶೆಟ್ಟಿ ಅವರ ಸೇವಾ ಬದುಕಿನ ಕುರಿತ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್, ತಾಪಂ ಇಒ ಭವಾನಿ ಶಂಕರ್, ಉಜಿರೆ ಗ್ರಾಪಂ ಆಡಳಿತಾಧಿಕಾರಿ ಮಹಾವೀರ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರದೀಪ್ ಬಿ.ಎಸ್. ಉಪಸ್ಥಿತರಿದ್ದರು.

ನೊಚ್ಚ ಪ್ರಕಾಶ್ ಶೆಟ್ಟಿ ಅಭಿವಂದನಾ ಸಮಿತಿ ಸಂಚಾಲಕ ರಘುರಾಮ ಶೆಟ್ಟಿ ಸ್ವಾಗತಿಸಿದರು. ಬಿ.ರವೀಂದ್ರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಬಿ.ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಮಗೆ ಉಪಕಾರ ಮಾಡಿದವರನ್ನು ಸ್ಮರಿಸುವ ಕಾರ್ಯವನ್ನು ಉಜಿರೆ ನಾಗರಿಕರು ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ ಅವರ ಸಾಧನೆ ಯುವಜನತೆಗೆ ಸ್ಫೂರ್ತಿ. ಕೆಲಸದಲ್ಲಿ ಅಚ್ಚುಕಟ್ಟುತನ, ಶಿಸ್ತು ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಅವರು ಗ್ರಾಮದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಡಾ.ಬಿ.ಎ.ಕುಮಾರ ಹೆಗ್ಡೆ ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ
ಜನರು ನೀಡಿದ ಗೌರವದಿಂದ ಮನಸ್ಸು ತುಂಬಿ ಬಂದಿದೆ. ಜೀವನ ಸಾರ್ಥಕವೆನಿಸುತ್ತಿದೆ. ಸಾಧನೆಯ ಹಿಂದೆ ಹಿರಿಯರ ಆಶೀರ್ವಾದ, ಕುಟುಂಬದ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಬೆಂಬಲವಿದೆ. ನೀಡಿದ ಸನ್ಮಾನವನ್ನು ನನ್ನೊಂದಿಗೆ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಅರ್ಪಿಸುವೆ.
ನೊಚ್ಚ ಪ್ರಕಾಶ್ ಶೆಟ್ಟಿ ನಿವೃತ್ತ ಪಿಡಿಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net