

ಯಶೋಧರ ವಿ.ಬಂಗೇರ ಮೂಡುಬಿದಿರೆ
ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ವೈಜ್ಞಾನಿಕ ರೀತಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಂಬಳ ಸಂರಕ್ಷಣೆ, ನಿರ್ವಹಣೆ, ತರಬೇತಿ ಅಕಾಡೆಮಿ ಮಾದರಿಯ ಹೆಜ್ಜೆ ಇಟ್ಟಿದೆ. ಕಡಲಕೆರೆಯಲ್ಲಿ ನಡೆಯುತ್ತಿರುವ ಅಕಾಡೆಮಿಯ 7ನೇ ವರ್ಷದ 10 ದಿನಗಳ ಕಂಬಳ ಓಟಗಾರರ ತರಬೇತಿ ಶಿಬಿರದಲ್ಲಿ ಕಾಸರಗೋಡಿನಿಂದ ಭಟ್ಕಳದವರೆಗಿನ ಆಸಕ್ತ ಅಭ್ಯರ್ಥಿಗಳ ಪೈಕಿ ಅಂತಿಮವಾಗಿ 42 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ.
123 ಮಂದಿಯಿಂದ 42 ಮಂದಿ ಆಯ್ಕೆ: ಈ ಬಾರಿ 123 ಮಂದಿ ಹೆಸರು ನೋಂದಾಯಿಸಿದ್ದು, ಮೊದಲ ಹಂತದಲ್ಲಿ 72 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಅಂತಿಮ ಸುತ್ತಿನಲ್ಲಿ ದೈಹಿಕ ಸಾಮರ್ಥ್ಯ, ಆಸಕ್ತಿ, ಕಂಬಳ ಕ್ರೀಡೆಯನ್ನು ಮುಂದುವರಿಸುವ ಬದ್ಧತೆಯನ್ನು ಪರಿಗಣಿಸಿ 42 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಪೈಂಟರ್, ಐಟಿಐ, ಎಂ.ಕಾಂ ಪದವೀಧರರು, ಜೆಸಿಬಿ ಆಪರೇಟರ್, ಚಾಲಕರು, ಶಿಲ್ಪಿಗಳು, ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಎಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಶೈಕ್ಷಣಿಕ ಹಿನ್ನೆಲೆಯವರು ಶಿಬಿರದಲ್ಲಿದ್ದಾರೆ.
ಅನುಭವಿಗಳಿಂದ ತಾಂತ್ರಿಕ ಪಾಠ: ಅಗ್ರಮಾನ್ಯ ಕಂಬಳ ಓಟಗಾರರಾದ ಪ್ರವೀಣ್ ಕೋಟ್ಯಾನ್, ಶ್ರೀನಿವಾಸ ಗೌಡ ಅವರನ್ನು ಕರೆಸಿ ಹಗ್ಗ, ನೇಗಿಲು ಹಿಡಿಯುವ ವಿಧಾನ ಸೇರಿದಂತೆ ಓಟದ ಸೂಕ್ಷ್ಮ ತಾಂತ್ರಿಕ ಅಂಶಗಳನ್ನು ಕಲಿಸಲಾಗುತ್ತಿದೆ.
ಅ.7ರಂದು ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ, ವಿವಿಧ ಸ್ಪರ್ಧೆಗಳು ನಡೆಯಲಿವೆ. ಅ.8ರಂದು ಕೋಟಿ ಚೆನ್ನಯ ಜೋಡುಕೆರೆಯಲ್ಲಿ ಸಬ್‌ಜೂನಿಯರ್, ನೇಗಿಲು ಕಿರಿಯ ವಿಭಾಗದ ಪ್ರಾಯೋಗಿಕ ಕಂಬಳ ನಡೆಯಲಿದ್ದು, ಸಂಜೆ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 6.30ರಿಂದ 7.30ರವರೆಗೆ ಯೋಗ, ಮೈದಾನದ ವ್ಯಾಯಾಮ ಕಡ್ಡಾಯವಾಗಿದ್ದು, ಆರಂಭಿಕ ದಿನಗಳಲ್ಲಿ ಕಂಬಳದ ಮೂಲ ಜ್ಞಾನಕ್ಕೆ ಒತ್ತು ನೀಡಲಾಗಿದೆ. ಸಂಜೆ ಮನಃಶಾಸ್ತ್ರ, ಯೋಜನಾಬದ್ಧತೆ, ವ್ಯಕ್ತಿತ್ವ ವಿಕಸನ, ಆರೋಗ್ಯ, ಕಂಬಳದ ಧಾರ್ಮಿಕ ಹಿನ್ನೆಲೆ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ವೈದ್ಯರ ಮೂಲಕ ಆಹಾರ ಕ್ರಮ, ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.