ಎಂಆರ್‌ಪಿಎಲ್ ದುರಂತ ಮೃತರ ಕುಟುಂಬಕ್ಕೆ 1.20 ಕೋಟಿ ರೂ. ನೆರವು

ಎಂಆರ್‌ಪಿಎಲ್ ದುರಂತ ಮೃತರ ಕುಟುಂಬಕ್ಕೆ  1.20 ಕೋಟಿ ರೂ. ನೆರವು
Published on: 

ಮಂಗಳೂರು : ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟ ಹಾಗೂ ಅಗ್ನಿ ದುರಂತದಲ್ಲಿ ಮೃತಪಟ್ಟ ಮೂಲ್ಕಿಯ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಸಂಸ್ಥೆಯು 1.20 ಕೋಟಿ ರೂ. ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯಗಳನ್ನು ಘೋಷಿಸಿದೆ.

ಮನೀಶ್ ಕರ್ಕಡ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಎಂಆರ್‌ಪಿಎಲ್ ಆಡಳಿತ ಮಂಡಳಿ, ಮೃತರ ಕುಟುಂಬಕ್ಕೆ ಸಂಸ್ಥೆ ಸಂಪೂರ್ಣ ಬೆಂಬಲ ನೀಡಲಿದೆ. ಮೃತರ ಕುಟುಂಬಕ್ಕೆ ಸಂಸ್ಥೆ ವತಿಯಿಂದ 90 ಲಕ್ಷ ರೂ. ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಸುಮಾರು 10 ಲಕ್ಷ ರೂ. ಹಾಗೂ ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ ಅಡಿಯಲ್ಲಿ ಸುಮಾರು 20 ಲಕ್ಷ ರೂ. ವಿಮಾ ಪ್ರಯೋಜನ ದೊರೆಯಲಿದೆ. ಇದರಿಂದ ಒಟ್ಟು ಆರ್ಥಿಕ ನೆರವು ಮತ್ತು ವಿಮಾ ಪ್ರಯೋಜನಗಳು ಸುಮಾರು 1.20 ಕೋಟಿ ರೂ.ಗೆ ತಲುಪಲಿವೆ. ಸೆಕೆಂಡರಿ ವರ್ಕ್‌ಫೋರ್ಸ್‌ಗೆ ಮೆಡಿಕ್ಲೇಮ್ ವಿಮೆ ಒದಗಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಚರ್ಚಿಸಿದ ಬಳಿಕ ಮೆಡಿಕ್ಲೇಮ್ ವ್ಯವಸ್ಥೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು. ಈ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆ ಸುಮಾರು ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಎಂಆರ್‌ಪಿಎಲ್ ತನ್ನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣಕ್ಕೆ ಬದ್ಧವಾಗಿದೆ. ಘಟನೆಯಿಂದ ಬಾಧಿತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಮುಂದುವರಿಸುವುದಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net