ಜೀವಂತ ವಿದ್ಯಾರ್ಥಿಗೆ ಇನ್ಸ್ಟಾಗ್ರಾಂನಲ್ಲಿ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿ

Instagram 23 may 20
Published on

ಬೆಂಗಳೂರು: ಎಲ್ಲೆಡೆ ಲಾಕ್​ಡೌನ್ ಮತ್ತು ಕರೊನಾ ಸಾವು- ನೋವಿನದ್ದೇ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ಕಿಡಿಗೇಡಿ ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು, ಬದುಕಿರುವ ವಿದ್ಯಾರ್ಥಿಯೊಬ್ಬನ ಫೋಟೋ ಅಪ್​ಲೋಡ್ ಮಾಡಿ ಶ್ರದ್ಧಾಂಜಲಿ ಕೋರಿದ್ದಾನೆ.

ಅನ್ನಪೂರ್ಣೆಶ್ವರಿನಗರದ 21 ವರ್ಷದ ಆರ್ಕಿಟೆಕ್ಚರ್ ವಿದ್ಯಾರ್ಥಿ, ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಖಾಸಗಿ ಕಾಲೇಜಿನ ಆರ್ಕಿಟೆಕ್ಚರ್ ವಿದ್ಯಾರ್ಥಿ, ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದಿದ್ದನು. ಮೇ 13ರಂದು ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದಿರುವ ಆರೋಪಿ 150ಕ್ಕೂ ಅಧಿಕ ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ರಾತ್ರಿ 10.30ರಲ್ಲಿ ವಿದ್ಯಾರ್ಥಿಯ ಫೋಟೋ ಅಪ್​ಲೋಡ್ ಮಾಡಿ ಆರ್​ಐಪಿ (ರೆಸ್ಟ್ ಇನ್ ಪೀಸ್) ಎಂದು ಬರೆದಿದ್ದ.

ಅನುಮಾನಗೊಂಡ ಸ್ನೇಹಿತ: ಇದನ್ನು ನೋಡಿದ ಆರ್ಕಿಟೆಕ್ಚರ್ ವಿದ್ಯಾರ್ಥಿಯ ಸ್ನೇಹಿತರು ಸಹ ‘ಆರ್​ಐಪಿ’ ಎಂದು ಪ್ರತಿಕ್ರಿಯಿಸುತ್ತಿದ್ದರು. ತಡರಾತ್ರಿ 12.15ರಲ್ಲಿ ಸ್ನೇಹಿತನೊಬ್ಬ ಅನುಮಾನ ಬಂದು ವಿದ್ಯಾರ್ಥಿ ಮೊಬೈಲ್​ಗೆ ಕರೆ ಮಾಡಿದ್ದಾನೆ. ನಿದ್ದೆಯಲ್ಲಿದ್ದ ವಿದ್ಯಾರ್ಥಿ, ಕರೆ ಸ್ವೀಕರಿಸಿ ‘ಇಷ್ಟೊತ್ತಿನಲ್ಲಿ ಯಾಕೊ ಕರೆ ಮಾಡಿದ್ದೀಯಾ’ ಎಂದು ಪ್ರಶ್ನಿಸಿದ್ದಾನೆ. ಗಾಬರಿಗೊಂಡ ಸ್ನೇಹಿತ, ಇನ್​ಸ್ಟಾಗ್ರಾಂನಲ್ಲಿ ಶ್ರದ್ಧಾಂಜಲಿ ಫೋಟೋ ಅಪ್​ಲೋಡ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಅಷ್ಟರಲ್ಲಿ ಕಿಡಿಗೇಡಿ ಖಾತೆಯನ್ನೇ ಡಿಲೀಟ್ ಮಾಡಿದ್ದ.

ಇದನ್ನೂ ಓದಿ:ಕರೊನಾ ಔಷಧಿ ಪ್ರಯೋಗಕ್ಕೆ ದೇಹ ನೀಡಲು ಸಿದ್ಧನೆಂದ ಗದಗದ ಈ ಯುವಕ; ಪ್ರಧಾನಿ ಕಚೇರಿಗೆ ಪತ್ರ  ಯಾರೂ ತಪ್ಪೊಪ್ಪಿಕೊಂಡಿಲ್ಲ: ಒಬ್ಬರಿಂದ ಒಬ್ಬರಿಗೆ ಶೇರ್ ಆಗಿ ಹಲವರಿಂದ ಕರೆಗಳು ಬಂದಿದ್ದು, ವಿದ್ಯಾರ್ಥಿ ಆಘಾತಗೊಂಡಿದ್ದಾನೆ. ಪರಿಚಿತ ವ್ಯಕ್ತಿಗಳೇ ಕೃತ್ಯ ಎಸಗಿರಬಹುದೆಂದು ಕಾಲೇಜು ಮತ್ತು ಫ್ರೆಂಡ್ಸ್ ವಾಟ್ಸ್​ಆಪ್ ಗ್ರೂಪ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದ. ಯಾರೊಬ್ಬರೂ ತಪ್ಪೊಪ್ಪಿಕೊಂಡಿಲ್ಲ. ಇದಾದ ಮೇಲೆ ವಿದ್ಯಾರ್ಥಿಯ ನಾಲ್ವರು ಸ್ನೇಹಿತರಿಗೂ ಶ್ರದ್ಧಾಂಜಲಿ ಫೋಟೋಗಳನ್ನು ಅಪ್​ಲೋಡ್ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನೊಂದ ವಿದ್ಯಾರ್ಥಿ, ಪಶ್ಚಿಮ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈತನ ಸ್ನೇಹಿತರು ಸಹ ಬೇರೆ ಬೇರೆ ಠಾಣೆಗಳಲ್ಲಿ ದೂರು ಕೊಟ್ಟಿದ್ದು, ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಕರಿಗೆ ಅನಾಹುತವಾದರೆ?

ಕರೊನಾ ಸೋಂಕು ಭೀತಿಯಲ್ಲಿ ಜಗತ್ತೇ ಭಯದಲ್ಲಿದೆ. ಇಂಥ ಸಂದರ್ಭದಲ್ಲಿ ವೇಳೆ ಮಗ ಸಾವನ್ನಪ್ಪಿದ್ದಾನೆ ಎಂದು ಗೊತ್ತಾಗಿ ಪಾಲಕರ ಜೀವಕ್ಕೆ ಅಪಾಯ ಸಂಭವಿಸಿದರೆ ಏನು ಗತಿ? ಸ್ನೇಹಿತರು ಮಾಡಿದ್ದರೆ ಬುದ್ಧಿವಾದ ಹೇಳಬೇಕೆಂದು ಕಾಲೇಜು, ಇತರ ಸ್ನೇಹಿತರನ್ನು ವಿಚಾರಿಸಿದಾಗ ಯಾರೊಬ್ಬರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಆರ್ಕಿಟೆಕ್ಚರ್ ವಿದ್ಯಾರ್ಥಿ ‘ವಿಜಯವಾಣಿ’ಗೆ ತಿಳಿಸಿದ್ದಾನೆ.

ವಿದ್ಯಾರ್ಥಿ ದೂರಿನ ಮೇರೆಗೆ ಕಿಡಿಗೇಡಿಗಳ ವಿರುದ್ಧ ಫೋಟೋ ದುರುಪಯೋಗ, ವಂಚನೆ, ಅಪಪ್ರಚಾರ ಆರೋಪದಡಿ ಎಫ್​ಐಆರ್ ದಾಖಲಿಸಿ ಆರೋಪಿ ಪತ್ತೆಗೆ ಬಲೆಬೀಸಲಾಗಿದೆ. | ಸಿಇಎನ್ ಠಾಣೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net