

ಗದಗ: ಜಗತ್ತಿಗೆ ಬಂದೊದಗಿದ ಮಹಾಮಾರಿ ಕರೊನಾ ವೈರಸ್ಗೆ ಇನ್ನೂ ಔಷಧಿಯಾಗಲೀ, ಲಸಿಕೆಯಾಗಲೀ ಕಂಡು ಸಿಕ್ಕಿಲ್ಲ. ಅದೆಷ್ಟೋ ಯೂನಿವರ್ಸಿಟಿಗಳ ಸಂಶೋಧಕರು, ಔಷಧ ತಯಾರಿಕಾ ಕಂಪನಿಗಳು ಕರೊನಾ ವಿರುದ್ಧ ಹೋರಾಡುವ ಲಸಿಕೆ, ಔಷಧಿ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ. ಕೆಲವು ಕಡೆ ಕಂಡು ಹಿಡಿದಿದ್ದರೂ ಅವಿನ್ನೂ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿ ಇದೆ.
ಔಷಧಿ, ಲಸಿಕೆಗಳನ್ನು ಪ್ರಾಣಿಗಳ ಮೇಲೆ ಸುಲಭವಾಗಿ ಪ್ರಯೋಗ ಮಾಡಬಹುದು. ಆದರೆ ಮನುಷ್ಯರ ಮೇಲಿನ ಪ್ರಯೋಗಕ್ಕೆ ಸ್ವ ಇಚ್ಛೆಯಿಂದ ಮುಂದೆ ಬರುವವರು ತೀರಾ ವಿರಳ.
ಹೀಗಿರುವಾಗ ಗದಗದ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಈ ಯುವಕ, ಕರೊನಾ ಔಷಧಕ್ಕೆ ದೇಹವನ್ನು ಒಡ್ಡಿಕೊಳ್ಳಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ವೀರೇಶ ಸುರೇಶ ಕುರವತ್ತಿ ಎಂಬ ಯುವಕ, ಕರೊನಾಕ್ಕೆ ಔಷಧಿ ಕಂಡು ಹಿಡಿಯುವಾಗ ಯಾರದ್ದಾದರೂ ದೇಹದ ಅವಶ್ಯಕತೆ ಬಿದ್ದರೆ ಹೇಳಿ, ನಾನು ಸಿದ್ಧನಿದ್ದೇನೆ ಎಂದು ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಹಾಗೇ, ತಮ್ಮ ಬಯೋಡೇಟಾವನ್ನೂ ಕಳಿಸಿಕೊಟ್ಟಿದ್ದಾರೆ.
ಕರೊನಾ ಮಾರಿಯಿಂದ ದೇಶ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತಮ್ಮ ಕೈಲಾದ ಸೇವೆ ಮಾಡಬೇಕು. ಹಾಗೇ ನಾನೂ ಸಿದ್ಧನಿದ್ದೇನೆ. ಕರೊನಾಕ್ಕೆ ಔಷಧಿ ಕಂಡು ಹಿಡಿಯುವಾಗ ಯಾವ ಕ್ಷಣದಲ್ಲಿ ಅವಶ್ಯಕತೆ ಇದ್ದರೂ ನನ್ನ ದೇಹವನ್ನು ಉಪಯೋಗಿಸಿಕೊಳ್ಳಿ. ನಾನು ದೇಹ ದಾನ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)