

ಬಾಳೆಹೊನ್ನೂರು: ಸಮಾಜವನ್ನು ತಲುಪುವ ಸುಲಭ ಕಲೆ ರಂಗಭೂಮಿ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.
ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಹದಿನೇಳನೇ ವರ್ಷದ ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪುತ್ತೂರಿನ ಸಂಸಾರ ಕಲಾವಿದರ ನಂಬಿಕೆದಾಯೆ ಹಾಸ್ಯಮಯ ಸಾಮಾಜಿಕ ತುಳು ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ರಂಗಭೂಮಿ ಕಲೆಯಲ್ಲಿ ಪ್ರೇಕ್ಷಕರ ಎದುರು ಕಲಾವಿದರು ನೈಜವಾಗಿ ಅಭಿನಯಿಸುವ ಅದ್ಭುತ ದೃಶ್ಯ ಮತ್ತು ಶ್ರಾವ್ಯ ಕಲೆಯಾಗಿದೆ. ಇದು ಸಮಾಜದ ಪ್ರತಿಬಿಂಬವಾಗಿ, ಮನುಷ್ಯನ ಭಾವನೆಗಳನ್ನು ಹಾಗೂ ಬದುಕಿನ ಕಥೆಗಳನ್ನು ತೆರೆದಿಡುವ ಜೀವಂತ ಮಾಧ್ಯಮ. ಸಮಾಜದ ತಪ್ಪುಗಳನ್ನು ತಿದ್ದಲು, ಜಾಗೃತಿ ಮೂಡಿಸಲು ಮತ್ತು ಸಾಮಾನ್ಯ ಜನರನ್ನು, ಸಮುದಾಯಗಳನ್ನು ಸುಲಭವಾಗಿ ತಲುಪಲು ರಂಗಭೂಮಿ ನೆರವಾಗುತ್ತದೆ. ರಂಗಭೂಮಿ ಕಲೆ ಶ್ರೀಮಂತ ಪರಂಪರೆ ಹೊಂದಿದ್ದು, ಈ ಕಲೆಯನ್ನು ಯುವಜನರು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಅ.15ರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಕರ ವಾಹಿನಿ ವಾರುಣೀ ರೂಪಿಣಿ ಪೂಜಾ ಪಾರಾಯಣ ನಡೆಯಲಿದೆ. ಬೆಳಗ್ಗೆ 9ರಿಂದ ಶೃಂಗೇರಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8ರಿಂದ ಕಳಸದ ಕಲಾ ಸಿಂಚನ ತಂಡದಿಂದ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ ಮತ್ತಿತರರ ಸಂಗಮ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ಸಂಸಾರ ಕಲಾವಿದರ ತಂಡದ ಮುಖ್ಯಸ್ಥ ಕೆ.ಟಿ.ಆನಂದ್ ವಿಟ್ಲ, ಕಲಾವಿದ ರಂಗಯ್ಯ ಬಲ್ಲಾಳ್ ಕೇದಿಲಾಯ, ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಬಿ.ಗಿರೀಶ್ ಬಂದಿಯಡ್ಕ, ನಟರಾಜ್ ಶೆಟ್ಟಿ, ಈಶ್ವರ್ ಇಟ್ಟಿಗೆ, ಸುಂದರ್ ಇಟ್ಟಿಗೆ, ಬಿ.ಕೆ.ನಾಗರಾಜ್, ಶಿವರಾಮ್ ಶೆಟ್ಟಿ, ಎಚ್.ಡಿ.ಸತೀಶ್, ನಾರಾಯಣ ಶೆಟ್ಟಿ, ಎಂ.ನಾರಾಯಣ ಮೇಲ್ಪಾಲ್, ಬಿ.ಜಗದೀಶ್ಚಂದ್ರ, ಮಂಜು ಹೊಳೆಬಾಗಿಲು, ಎಚ್.ಎಚ್.ಕೃಷ್ಣಮೂರ್ತಿ, ರಾಜಪ್ಪಗೌಡ ಇತರರಿದ್ದರು.