ಶ್ರೀ ದುರ್ಗಾದೇವಿ ಉತ್ಸವಕ್ಕೆ ಚಾಲನೆ Durga Devi festival begins

ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾದೇವಿ ವಿಗ್ರಹ.
ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾದೇವಿ ವಿಗ್ರಹ.
Published on: 

ಬಾಳೆಹೊನ್ನೂರು: ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ 17ನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಬಾ ಸೇವಕ ಜಿ.ರಾಜಗೋಪಾಲ ಜೋಷಿ ಚಾಲನೆ ನೀಡಿದರು.

ಭಾನುವಾರ ಮುಂಜಾನೆ ಕ್ಷೇತ್ರನಾಥ ಮಾರ್ಕಾಂಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ನಾಗದೇವರಿಗೆ ಕ್ಷೀರಾಭಿಷೇಕ, ಮೃತ್ಯಂಬಿಕಾ ಅಮ್ಮನವರಿಗೆ ಅಭಿಷೇಕ, ಸಹಸ್ರನಾಮಾರ್ಚನೆ ಹಾಗೂ ಫಲಸಮರ್ಪಣೆ, ದುರ್ಗಾ ಸನ್ನಿಧಿಯಲ್ಲಿ ಗಣಹೋಮ ನಡೆಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದುರ್ಗಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ತಂದಿದ್ದ ಬಾಗಿನವನ್ನು ದುರ್ಗಾದೇವಿ ಮತ್ತು ಮೃತ್ಯಂಬಿಕಾ ಅಮ್ಮನವರ ದೇವಸ್ಥಾನಕ್ಕೆ ರಾಜಗೋಪಾಲ ಜೋಷಿ ಸಮರ್ಪಿಸಿದರು. ಪಟ್ಟಣದ ಯುವ ಉದ್ಯಮಿ ಅಕ್ಷಯ್ ರಾಧಾಕೃಷ್ಣ ಪೈ ಅವರು ಶ್ರೀದೇವಿಗೆ 3 ಲಕ್ಷ ರೂ. ಮೌಲ್ಯದ ಬೆಳ್ಳಿಯ ಹಾರ ಸಮರ್ಪಿಸಿದರು.

ಮಧ್ಯಾಹ್ನ ಹಂಸವಾಹಿನಿ ಬ್ರಾಹ್ಮೀ ಪೂಜೆ, ಸಪ್ತಶತೀ ಪಾರಾಯಣ ಪೂಜೆ ನಡೆಯಿತು. ಅ.12ರ ಬೆಳಗ್ಗೆ 8.30ರಿಂದ ಮಧ್ಯಾಹ್ನದವರೆಗೆ ವೃಷಭವಾಹಿನಿ, ಮಾಹೇಶ್ವರಿ ಪೂಜಾ ಪಾರಾಯಣ, ಸಂಜೆ 6ರಿಂದ ಭಕ್ತಾದಿಗಳಿಂದ ಪೂಜಾ ಸೇವೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಗಾಯಕ ಹಿರೇನಲ್ಲೂರು ಶ್ರೀನಿವಾಸ್ ನೇತೃತ್ವದಲ್ಲಿ ಸುಗಮ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಮಾರ್ಕಾಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ದುರ್ಗಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಕೆ.ಟಿ.ವೆಂಕಟೇಶ್, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಉಪೇಂದ್ರ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ನಾರಾಯಣ ಶೆಟ್ಟಿ, ಬಿ.ಗಿರೀಶ್, ಸುಂದರ್ ಇಟ್ಟಿಗೆ, ಮಣಿಕಂಠನ್, ಸಮಿತಿ ಸದಸ್ಯರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net