ಶೃಂಗೇರಿ ಕ್ಷೇತ್ರದಲ್ಲಿ 100 ಆಟೋ ನಿಲ್ದಾಣ ನಿರ್ಮಾಣ

Proposal to construct 100 auto stands in the Sringeri region
ಎನ್.ಆರ್.ಪುರ ಜೈ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಎಚ್.ಆರ್.ಜಗದೀಶ್,  ಬಿ.ಎಸ್.ಆಶೀಶ್‌ಕುಮಾರ್ ಇತರರಿದ್ದರು.
ಎನ್.ಆರ್.ಪುರ ಜೈ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಎಚ್.ಆರ್.ಜಗದೀಶ್, ಬಿ.ಎಸ್.ಆಶೀಶ್‌ಕುಮಾರ್ ಇತರರಿದ್ದರು.
Published on: 

ಎನ್.ಆರ್.ಪುರ: ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 100 ಆಟೋ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಆಟೋ ಸಂಘಟನೆಯಿಂದ ಪಟ್ಟಿ ತಯಾರಿಸಿ ನೀಡಿದರೆ ಸುಸಜ್ಜಿತ ನಿಲ್ದಾಣಗಳನ್ನು ನಿರ್ಮಿಸಿ, ಅವುಗಳಲ್ಲಿ ಮನರಂಜನೆಗೆ ಟಿವಿ ಅಳವಡಿಸಿಕೊಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಆಟೋ ಚಾಲಕರು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸುವುದರ ಜತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಆಟೋ ಚಾಲಕರು ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿಕೊಂಡು ಅಲ್ಲಿ ದಾನಿಗಳಿಂದ ಸಂಗ್ರಹಿಸಿದ ಅನುದಾನವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟು ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರದಾದ್ಯಂತ ಲೋಕೋಪಯೋಗಿ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಹಾಗೂ ಮರುಡಾಂಬರೀಕರಣ ಮಾಡುವ ಕಾಮಗಾರಿ ಆರಂಭವಾಗಿದ್ದು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಯಪುರ, ಬಾಳೆಹೊನ್ನೂರಿನಲ್ಲಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಶೃಂಗೇರಿ ಪಟ್ಟಣದ ರಸ್ತೆಯನ್ನು ವಿಸ್ತರಣೆ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಶಿಥಿಲಗೊಂಡ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜಂಟಿ ಸಮೀಕ್ಷೆ ಪೂರ್ಣಗೊಂಡ ಹಕ್ಕುಪತ್ರ ನೀಡಲಾಗುವುದು. ಎನ್.ಆರ್.ಪುರದಲ್ಲಿ ಆಶ್ರಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿದ್ದ ಎಂ.ಶ್ರೀನಿವಾಸ್ ಅವರು ಪಟ್ಟಣದ ರಸ್ತೆ ವಿಸ್ತರಣೆಗೆ 60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಿದ್ದರಾಮಯ್ಯ ಸೇತುವೆ ಬಳಿ ರೆಸಾರ್ಟ್, ಬೋಟಿಂಗ್, ಜಲಕ್ರೀಡೆಗೆ 62 ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿಗೆ 7 ಲಕ್ಷ ರೂ. ಸಹಾಯಹಸ್ತ ಚಾಚಿದ್ದಾರೆ ಎಂದರು.

ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಕನ್ನಡ ಲಿಪಿಗಳ ರಾಣಿ ಎಂಬ ಕೀರ್ತಿ ಮುಡಿಗೇರಿಸಿಕೊಂಡಿದೆ. ಇಮ್ಮಡಿ ಪುಲಕೇಶಿ ಆಳ್ವಿಕೆ ಕಾಲದಲ್ಲಿ ಅಖಂಡ ಭಾರತ ಎನಿಸಿಕೊಂಡಿರುವ ಅಫ್ಘಾನಿಸ್ತಾನದವರೆಗೂ ಕನ್ನಡ ನಾಡಿನ ಗಡಿ ವಿಸ್ತರಣೆಯಾಗಿತ್ತು. ಅಲ್ಲಿಯವರೆಗೂ ಕನ್ನಡದ ಕಂಪನ್ನು ಪಸರಿಸಿದ್ದರು. ರಾಜಸ್ತಾನದ ದೇವಸ್ಥಾನದಲ್ಲಿ, ತಮಿಳುನಾಡಿನಲ್ಲೂ ಕನ್ನಡದ ಶಾಸನಗಳು ಇವೆ. ಈಗ ಕನ್ನಡ ಬಳಕೆ ಕಡಿಮೆಯಾಗುತ್ತಿದ್ದು, ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದರು. ಸರ್ಕಾರ ಆಟೋ ಚಾಲಕರಿಗೆ ವಿಮಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ದಾನಿ ವಿಶ್ವನಾಥ್ ಗದ್ದೆಮನೆ ಅವರ ತಂದೆ ಅಣ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆಟೋ ಚಾಲಕರ ಮಕ್ಕಳಾದ ಆದ್ಯಾ, ಋದ್ವೇಶ್, ರಕ್ಷಿತಾ, ದಾನಿ ಎಸ್.ಎಸ್.ಸಂತೋಷ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎನ್.ತಾಜ್ ಕೊಪ್ಪ ಅರ್ಪಿಸುವ ಕರ್ನಾಟಕದ ಆಯ್ದ ಕಲಾವಿದರನ್ನೊಳಗೊಂಡ ತಂಡದಿಂದ ಆರ್ಕೆಸ್ಟ್ರಾ ನಡೆಯಿತು.

ಆಟೋ ಚಾಲಕರ ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಜಗದೀಶ್, ಪಪಂ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್‌ಕುಮಾರ್, ಜಿಪಂ ಮಾಜಿ ಸದಸ್ಯ ಪಿ.ಜೆ.ಆಂಟನಿ, ಡಾ. ಎಲ್ದೋಸ್ ಟಿ. ವರ್ಗೀಸ್, ವಿ.ಮಧುಸೂದನ್, ಎನ್.ಎಂ.ಕಾಂತರಾಜ್, ಜಿ.ದಿವಾಕರ, ವಿಜೇಂದ್ರ ಎ.ಜಿ.ಕಟ್ಟೆ, ವಿಜಯಕುಮಾರ್, ಸಂದೇಶ, ವಿಠಲ, ಕೆ.ಟಿ.ಜೋಬಿ, ಕೆ.ಅಣ್ಣಪ್ಪ, ಲೋಕೇಶ್, ಉಷಾ, ಗಾಯತ್ರಿ, ಸುಮತಿ ಇತರರಿದ್ದರು.