ವೈದ್ಯಕೀಯ ಸೇವೆ ಜತೆಗೆ ಮಕ್ಕಳ ಬಾಳಿಗೆ ಬೆಳಕಾದ ವೈದ್ಯ

A doctor who brought light into children's
 ಜಯಪುರದ ವೈದ್ಯ ಇಸ್ಮಾಯಿಲ್
ಜಯಪುರದ ವೈದ್ಯ ಇಸ್ಮಾಯಿಲ್
Published on: 

ಕಿಬ್ಳಿ ಪ್ರಸನ್ನಕುಮಾರ್ ಜಯಪುರ

ಪ್ರಸಕ್ತ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುತ್ತಿವೆ. ಅಧಿಕಾರ, ಹಣವುಳ್ಳವರು ಖಾಸಗಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರವನ್ನು ಹಣ ಗಳಿಕೆಯ ಮೂಲವಾಗಿಸಿಕೊಳ್ಳುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ವೈದ್ಯರೊಬ್ಬರು ದುಡಿದ ಹಣವನ್ನು ಸರ್ಕಾರಿ ಶಾಲೆಗಳಿಗೆ ವಿನಿಯೋಗಿಸಿ ಶಿಕ್ಷಣ ಸೇವೆಯನ್ನೂ ಮಾಡುತ್ತಿದ್ದಾರೆ.

ಹೌದು, ಸೇವೆ ಎಂಬುದು ಕೇವಲ ಮಾತಿನಲ್ಲಿರದೆ, ಕೃತಿಯಲ್ಲಿ ಫಲಿಸಬೇಕು ಎಂಬುದನ್ನು ಈ ವೈದ್ಯರು ಸಾಧಿಸಿ ತೋರಿಸುತ್ತಿದ್ದಾರೆ. ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಮನೋಭಾವ ಬೆಳೆಸಿಕೊಂಡವರು ಜಯಪುರದ ಡಾ. ಇಸ್ಮಾಯಿಲ್. 1988ರಲ್ಲಿ ಜಯಪುರದಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ ಅವರು, 38 ವರ್ಷಗಳಿಂದ ಆರೋಗ್ಯದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.

ಡಾ. ಇಸ್ಮಾಯಿಲ್ ಕ್ಲಿನಿಕ್ ಮೂಲಕ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ಧನಸಹಾಯ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ಗಮನಿಸಿ ಅತಿಥಿ ಶಿಕ್ಷಕರನ್ನು ನೇಮಿಸಿ ಪ್ರತಿ ತಿಂಗಳೂ ಅವರಿಗೆ ಗೌರವಧನ ನೀಡುವ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.

ಜಯಪುರ ಸರ್ಕಾರಿ ಶಾಲೆಗೆ ಕಳೆದ ಏಳು ವರ್ಷಗಳಿಂದ ಓರ್ವ ಅತಿಥಿ ಶಿಕ್ಷಕರನ್ನು ನೇಮಿಸಿ, ವೈಯಕ್ತಿಕ ಹಣದಿಂದ ವೇತನ ನೀಡುತ್ತಿದ್ದಾರೆ. ಬಿಳಲುಕೊಪ್ಪ, ಕೋಟೆತೋಟ, ಮಕ್ಕಿಕೊಪ್ಪ ಕಾನ್ವೆಂಟ್, ಮಲಗಾರು ಸರ್ಕಾರಿ ಶಾಲೆಗಳಿಗೆ ಓರ್ವರಂತೆ ನಾಲ್ವರು ಅತಿಥಿ ಶಿಕ್ಷಕರನ್ನು ನೇಮಿಸಿ ಪ್ರತಿ ತಿಂಗಳೂ ವೇತನ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಕಾಳಜಿ ಈ ನೆರವಿನ ಹಿಂದಿದೆ.

ಇದರೊಂದಿಗೆ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಶಿಕ್ಷಣ ಪಡೆಯುತ್ತಿರುವ 1ರಿಂದ 4ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 500 ರೂ. ಹಾಗೂ 5ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ 1000 ರೂ. ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಬಿಜೆಮ್ ಎಜುಕೇಶನ್ ಟ್ರಸ್ಟ್‌ನ ಇಬ್ಬರೂ ಶಿಕ್ಷಕರಿಗೆ ವೇತನ ನೀಡುತ್ತಿದ್ದಾರೆ. ಒಟ್ಟಾರೆ ವಿದ್ಯಾರ್ಥಿ ವೇತನ, ಅತಿಥಿ ಶಿಕ್ಷಕರ ಸಂಬಳಕ್ಕಾಗಿ ಪ್ರತಿ ತಿಂಗಳು 80 ಸಾವಿರ ರೂ.ಗೂ ಹೆಚ್ಚು ದೇಣಿಗೆ ನೀಡುತ್ತಿದ್ದಾರೆ.

ಸಂಪಾದನೆಯ ಒಂದು ಭಾಗವನ್ನು ಸಮಾಜದ ಭವಿಷ್ಯವಾದ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿ ಮೂಲಕ, ಜನರ ಆರೋಗ್ಯ ಕಾಪಾಡುವುದರ ಜತೆಗೆ ಶಿಕ್ಷಣದ ಮೂಲಕ ಸಮಾಜದ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿರುವ ಡಾ. ಇಸ್ಮಾಯಿಲ್ ಅವರ ಸೇವೆ ಮಾದರಿ.

ಕಟ್ಟೆಮನೆ, ಲೋಕನಾಥಪುರ, ನಾರ್ವೆ, ಜಯಪುರ, ಮಕ್ಕಿಕೊಪ್ಪ ಕಾನ್ವೆಂಟ್ ಸೇರಿದಂತೆ ಹತ್ತಾರು ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ, ಸೋಲಾರ್ ದೀಪ ಅಳವಡಿಕೆಗೆ ವೈಯಕ್ತಿಕ ನೆರವು, ಅತಿಥಿ ಶಿಕ್ಷಕರಿಗೆ ವೇತನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶಿಕ್ಷಣ ಸಂಸ್ಥೆಗೆ ಮಾಸಿಕ ದೇಣಿಗೆ, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಹೀಗೆ ಹಲವು ರೀತಿಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಡಾ. ಇಸ್ಮಾಯಿಲ್ ಅವರ ಬದುಕು ಕೂಡ ಅತಿ ಸರಳ. ಬಣ್ಣ ಮಾಸಿರುವ ಕ್ಲಿನಿಕ್ಕಿನ ಬೋರ್ಡ್, ಅಲ್ಲಿರುವ ಹಳೇ ಕಾಲದ ಮರದ ಕುರ್ಚಿ, ಅಲ್ಲಾಡುತ್ತಿರುವ ಟೇಬಲ್ ಅವರ ಸರಳತೆಗೆ ಸಾಕ್ಷಿ.