

ಬಾಳೆಹೊನ್ನೂರು: ವಿಶ್ವಕರ್ಮರ ಪಂಚ ವೃತ್ತಿಗಳಿಗೆ ಯಾವುದೇ ಜಾತಿ, ಮತ, ಧರ್ಮ ಹಾಗೂ ಪಂಥದ ಬೇಧಗಳಿಲ್ಲ ಎಂದು ವಡ್ಡಾಳ್ ಕಾಶಿಮಠದ ಜಗದ್ಗುರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರೀ ಪೀಠದ ಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಹೇಳಿದರು.
ರಂಭಾಪುರಿ ಮಠ ರಸ್ತೆಯ ರೇಣುಕನಗರದ ವಿಶ್ವ ಕರ್ಮ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಸಮುದಾಯ ಬಾಂಧವರ ಸಭೆಯಲ್ಲಿ ಆಶೀರ್ವಚನ ನೀಡಿ, ಇಂದು ಜಾತಿ, ಜಾತಿಗಳ ನಡುವೆ ಬಹಳ ಹೋರಾಟ ನಡೆಯುತ್ತಿದೆ. ನಮ್ಮ ಜಾತಿಯೇ ಶ್ರೇಷ್ಠ ಎಂದು ಹಲವರು ವಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಯಾವುದೇ ಜಾತಿ ಬೇಧಗಳಿಲ್ಲ. ಎಲ್ಲ ಸಮುದಾಯದವರು ವಿಶ್ವಕರ್ಮರನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ಯಾರಿಗೆಲ್ಲ ಪಂಚವೃತ್ತಿಯ ಅಪೇಕ್ಷೆಯಿದೆ ಅವರೆಲ್ಲರೂ ಬೇಧ ತೋರದೆ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದರು.
ವಿಶ್ವಕರ್ಮರು ಎಲ್ಲರಿಗೂ ಮನೆ, ಕಟ್ಟಡ, ದೇವಾಲಯ ಮುಂತಾದವನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ ತಮಗಾಗಿ ಏನನ್ನೂ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಂದೆಯಾದರೂ ಸಹ ತಮ್ಮ ವ್ಯಾಪ್ತಿಯ ವಿಶ್ವಕರ್ಮರಲ್ಲಿ ಅಗತ್ಯವುಳ್ಳವರಿಗೆ ಮನೆ, ಸಮುದಾಯಕ್ಕೆ ಭವನ, ದೇವಾಲಯ ನಿರ್ಮಾಣ ಮಾಡಲು ಹೆಚ್ಚಿನ ಗಮನಹರಿಸಬೇಕು. ಸಮುದಾಯ ಬಾಂಧವರು ಒಟ್ಟಾಗಿದ್ದರೆ ಈ ಕಾರ್ಯಗಳನ್ನು ಮಾಡಲು ಸಾಧ್ಯ. ಸಾಮಾಜಿಕ ಜೀವನ, ಸಂಘದ ವಿಚಾರ ಬಂದಾಗ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸಬೇಕು. ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.
ತಂದೆ ತಾಯಂದಿರು ತಮ್ಮ ಜೀವನವನ್ನು ಮಕ್ಕಳಿಗಾಗಿಯೇ ಮುಡಿಪಾಗಿಟ್ಟಿದ್ದು, ಮಕ್ಕಳಿಗೆ ಕೇವಲ ವಿದ್ಯೆ ಮಾತ್ರ ಕೊಟ್ಟರೆ ಸಾಲುವುದಿಲ್ಲ. ಸಂಸ್ಕಾರ ಕಲಿಸಿದರೆ ಮಾತ್ರ ಜೀವನ ಸಾರ್ಥಕವಾಗಲಿದೆ. ವಿದ್ಯೆ ಇಲ್ಲದಿದ್ದರೂ ಸಹ ಮನುಷ್ಯ ಜೀವನ ಮಾಡಲು ಸಾಧ್ಯವಿದೆ. ಆದರೆ ಸಂಸ್ಕಾರ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ಆಯಾ ವಯಸ್ಸಿಗೆ ಅನುಗುಣವಾಗಿ ಷೋಡಷ ಸಂಸ್ಕಾರಗಳನ್ನು ನೀಡಬೇಕಿದೆ. ಓರ್ವ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗಲು ತಾಯಿಯಿಂದ ಮಾತ್ರ ಸಾಧ್ಯವಿದೆ ಎಂದರು.
ವಿಶ್ವಕರ್ಮ ಸಂಘದ ಅಧ್ಯಕ್ಷ ಮಂಜುನಾಥ್ ಆಚಾರ್ಯ, ಗೌರವಾಧ್ಯಕ್ಷ ಪದ್ಮನಾಭ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮಹಲಿಂಗ ಆಚಾರ್ಯ, ಪದಾಧಿಕಾರಿಗಳಾದ ರಘು ಆಚಾರ್ಯ, ರಾಮಚಂದ್ರ ಆಚಾರ್ಯ, ರವೀಂದ್ರ ಆಚಾರ್ಯ, ಗ್ರಾಮ ಮೊಕ್ತೇಸರ ರಾಮಚಂದ್ರ ಆಚಾರ್ಯ, ಪ್ರಕಾಶ್ ಆಚಾರ್ಯ, ಹರೀಶ್ ಆಚಾರ್ಯ, ಉಮೇಶ್ ಆಚಾರ್ಯ ಹಾಗೂ ಕಾಳಿಕಾಂಬ ಮಹಿಳಾ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.
ದಕ್ಷಿಣ ಭಾರತದಲ್ಲಿ ವಿಶ್ವಕರ್ಮರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಇದೂವರೆಗೂ ಯಾರೂ ಸಹ ಸಮುದಾಯದಿಂದ ಶಾಸಕರಾಗಿ ಆಯ್ಕೆಯಾಗಿಲ್ಲ. ಮಂತ್ರಿ, ಮುಖ್ಯಮಂತ್ರಿಯೂ ಆಗಿಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯವೂ ಮರೀಚಿಕೆಯಾಗಿದೆ ಎಂದು ಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಹೇಳಿದರು. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯೆಯ ಸಂಪತ್ತು ನೀಡಿ, ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತೀರ್ಣರಾಗುವಂತೆ ಮಾಡಬೇಕಿದೆ. ಆಗ ಸಮುದಾಯದ ಯುವಜನರು ಜನಪ್ರತಿನಿಧಿಗಳ ಮಾರ್ಗದರ್ಶಕರಾಗಿ ಆಡಳಿತ ನಿರ್ವಹಿಸುವ ಅವಕಾಶ ದೊರೆಯಲಿದೆ. ಈ ನಿಟ್ಟಿನಲ್ಲಿ ಸಮುದಾಯ ಬಾಂಧವರು ಪ್ರಯತ್ನ ಮಾಡಬೇಕಿದೆ ಎಂದರು.