

ಎನ್.ಆರ್.ಪುರ: ಮಲೆನಾಡಿನ ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಗುರುವಿಗೆ ಹಾಗೂ ರಾಜನಿಗೆ ಗೌರವ ನೀಡಲಾಗುತ್ತದೆ. ಮಲೆನಾಡಿಗೆ ಮುಖ್ಯಮಂತ್ರಿ ಬಂದಾಗ ರಾಜನಂತೆ ಸಿಂಹಾಸನದಲ್ಲಿ ಕೂರಿಸಿ, ಗೌರವಿಸಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ ರಾಜ ಪ್ರಜೆಯನ್ನು ಬೀದಿಯಲ್ಲಿ ನಿಲ್ಲಿಸಬಾರದು ಎಂದು ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಿದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಸರ್ಕಾರ ರೈತರ ಕಣ್ಣೊರೆಸುವ ಪ್ರಯತ್ನ ಮಾಡಬಾರದು ಎಂದರು.
ಅನೇಕ ಕಡೆಗಳಲ್ಲಿ ಅರಣ್ಯದಲ್ಲಿ ರೆಸಾರ್ಟ್, ಹೋಂ ಸ್ಟೇಗೆ ಅನುಮತಿ ನೀಡುತ್ತಾರೆ. ರೈತರ ಮನೆಗಳಿಗೆ ಕಂದಾಯ ವಿಸಿ ಹಕ್ಕು ಪತ್ರ ನೀಡಬೇಕು. ಮಲೆನಾಡಿಗೆ ಕಷ್ಟ ಬಂದಾಗ ಬೇರೆ ಜಿಲ್ಲೆಯವರೂ ನೆರವಿಗೆ ಬರಬೇಕು. ರಾಜ್ಯ ಸರ್ಕಾರ ಮನೆ ಕಂದಾಯ ರದ್ದುಪಡಿಸುವ ಆದೇಶ ಹಿಂಪಡೆಯಬೇಕು. ಜೈ ಜವಾನ್ ಜೈ ಕಿಸಾನ್ ಎಂಬಂತೆ ರೈತರ ಮಗನು ಸಹ ಕೃಷಿ ಮಾಡುತ್ತಾನೆ. ದೇಶ ಕಾಯುವ ಸೈನಿಕನಾಗಿ ದೇಶದ ರಕ್ಷಣೆ ಸಹ ಮಾಡುತ್ತಾನೆ. ಮಂತ್ರಿಗಳು, ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕಾರ ಮಾಡುವವರೆಗೂ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಲು ಸಭೆ ತೀರ್ಮಾನಿಸಿತು. ಮಲೆನಾಡಿನ ರೈತರ ಮೇಲೆ ಇದೇ ರೀತಿ ದೌರ್ಜನ್ಯ ಮುಂದುವರಿದರೆ ಮುಂದಿನ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಮತ ಬಹಿಷ್ಕಾರ ಹಾಕುವ ಬಗ್ಗೆಯೂ ಪ್ರತಿಭಟನಾ ಸಭೆಯಲ್ಲಿ ಚರ್ಚೆ ನಡೆಯಿತು.
ಕರ್ನಾಟಕ ಪಂಚಾಯತ್ ರಾಜ್ ಸಚಿವಾಲಯ ಸರ್ಕಾರಿ ಜಾಗದ ಮನೆ ಕಂದಾಯ ವಜಾ ಮಾಡುವ ಆದೇಶವನ್ನು 30 ದಿನದ ಒಳಗೆ ರದ್ದು ಮಾಡದಿದ್ದರೆ ಪ್ರತಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಸಾವಿರಾರು ಜನರು ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇದಕ್ಕೆ ಕಂದಾಯ ಸಹ ಕಟ್ಟುತ್ತಿದ್ದಾರೆ. ಆದರೆ ಸರ್ಕಾರದ ಹೊಸ ಆದೇಶದ ಪ್ರಕಾರ ಕಂದಾಯ ರದ್ದಾಗುತ್ತದೆ. ಇದರಿಂದ ಮನೆ ಕಟ್ಟಿಕೊಂಡವರ ವಿದ್ಯುತ್ ಬಿಲ್, ನೀರಿನ ಬಿಲ್ ಸಹ ರದ್ದಾಗುತ್ತದೆ. ಮುಂದೆ ಮನೆಯನ್ನೂ ಖಾಲಿ ಮಾಡಿಸುತ್ತಾರೆ. ಆದೇಶ ರದ್ದು ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ಹೇಳಿದರು. ಜಿಲ್ಲಾಧಿಕಾರಿ ಇಲ್ಲಿಗೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. 6 ತಿಂಗಳ ಕಾಲಾವಕಾಶ ನೀಡಿ, ಅರ್ಜಿದಾರರು ಸಾಕ್ಷಿಗಳನ್ನು ಒದಗಿಸಲು ಅವಕಾಶ ಮಾಡಿಕೊಟ್ಟು, ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲಿಸಬೇಕು. 75 ವರ್ಷದ ಸಾಕ್ಷಿ ಬೇಕೆನ್ನುವ ನಿಯಮವನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ, ಹಂಚಿನಮನೆ ರಾಘವೇಂದ್ರ, ರಂಜಿತ್, ದಿಗಂತ ಬಿಂಬೈಲ್, ಅದ್ದಡ ಸತೀಶ್, ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ, ಆಟೋ ಚಾಲಕರ ಸಂಘ, ದಲಿತ ಸಂಘರ್ಷ ಸಮಿತಿ, ವಾಲ್ಮೀಕಿ ಸಂಘ, ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.