

ಎನ್.ಆರ್.ಪುರ: ಬೈರಾಪುರ ಗ್ರಾಮಕ್ಕೆ ಭದ್ರಾ ಹಿನ್ನೀರಿನಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಚೌಡಿಕಟ್ಟೆ ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಗ್ರಾಮಸ್ಥ ಚಿತ್ರಪ್ಪ ಯರಬಾಳ್ ಮಾತನಾಡಿ, ಬೈರಾಪುರ ಗ್ರಾಮವು ಭದ್ರಾ ಹಿನ್ನೀರು ಸಮೀಪದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ವಿಪರ್ಯಾಸ. ಗ್ರಾಮದ ಜನರು ಮತ್ತು ಜಾನುವಾರುಗಳಿಗೆ ಪ್ರತಿದಿನ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ತಾತ್ಕಾಲಿಕ ಪರಿಹಾರಕ್ಕೆ ಮುಂದಾಗದೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಭದ್ರಾ ಹಿನ್ನೀರು ಗ್ರಾಮದ ಸಮೀಪದಲ್ಲೇ ಇರುವುದರಿಂದ ಅಲ್ಲಿಂದಲೇ ಪೈಪ್‌ಲೈನ್ ಮೂಲಕ ನೀರನ್ನು ತಂದು ಗ್ರಾಮಕ್ಕೆ ಪೂರೈಸಬೇಕು. ಯಾವ ಕಾರಣಕ್ಕೂ ಕೊಳವೆಬಾವಿ ಕೊರೆಸುವ ಯೋಜನೆ ಬೇಡ. ಬೇರೆಯವರಿಂದ ನೀರು ಪಡೆದು ಪೂರೈಸುವ ವ್ಯವಸ್ಥೆಯೂ ಬೇಡ. ಟ್ಯಾಂಕರ್ ಮೂಲಕ ನೀರು ಕೊಡುವ ತಾತ್ಕಾಲಿಕ ಪರಿಹಾರವೂ ನಮಗೆ ಅಗತ್ಯವಿಲ್ಲ. ನಮಗೆ ಬೇಕಿರುವುದು ಭದ್ರಾ ಹಿನ್ನೀರಿನಿಂದಲೇ ನಿರಂತರವಾಗಿ ದೊರೆಯುವ ಶಾಶ್ವತ ಕುಡಿಯುವ ನೀರು ಎಂದು ಗ್ರಾಮಸ್ಥರು ತಮ್ಮ ಬೇಡಿಕೆಯನ್ನು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸುನೀಲ್‌ಕುಮಾರ್, ಗ್ರಾಪಂ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್, ಪಿಡಿಒ ಸುಮಿತ್ರಾ, ಗ್ರಾಮ ಆಡಳಿತಾಧಿಕಾರಿ ವಿನೋದ್ ಇತರರಿದ್ದರು.