ಬಾಳೆಹೊನ್ನೂರಿನಲ್ಲಿ ಶ್ರೀ ದುರ್ಗಾದೇವಿ ಜಲಸ್ತಂಭನ Sri Durga Devi Water Dam

ಬಾಳೆಹೊನ್ನೂರಿನ ನವರಾತ್ರಿ ದುರ್ಗಾದೇವಿ ಉತ್ಸವದ ಜಲಸ್ತಂಭನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಬಾಳೆಹೊನ್ನೂರಿನ ನವರಾತ್ರಿ ದುರ್ಗಾದೇವಿ ಉತ್ಸವದ ಜಲಸ್ತಂಭನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
Published on: 

ಬಾಳೆಹೊನ್ನೂರು: ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹದ ಜಲಸ್ತಂಭನ ಶೋಭಾಯಾತ್ರೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಹನ್ನೊಂದು ದಿನಗಳ ಪರ್ಯಂತ ದೇವಿ ಸನ್ನಿಧಿಯಲ್ಲಿ ವಿವಿಧ ಪೂಜೆ, ಹೋಮ ನಡೆಯಿತು. ಹತ್ತು ದಿನಗಳ ಕಾಲ ಪ್ರತಿನಿತ್ಯ ದುರ್ಗಾಮಂಟಪದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ದಿನ ಸಂಜೆ ದುರ್ಗಾಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರೋಪದಲ್ಲಿ ಕರದಾಳದ ಡಾ. ಪ್ರಣವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಡೇ ದಿನ ಬುಧವಾರ ಬೆಳಗ್ಗೆಯಿಂದಲೇ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಸಂಪ್ರದಾಯಬದ್ಧವಾಗಿ ನಡೆದವು. ಮಧ್ಯಾಹ್ನ ಹದಿನೈದು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಬೆಳಗ್ಗೆ ಮೃತ್ಯಂಬಿಕ ಅಮ್ಮನವರ ವೇದಿಕೆಯಲ್ಲಿ ಗಾಯಕರಾದ ಹನುಮಂತ ಲಮಾಣಿ, ಕಲಾವತಿ ದಯಾನಂದ್ ನೇತೃತ್ವದಲ್ಲಿ ಸುಗಮ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.

ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಶೋಭಾಯಾತ್ರೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಬಿಳಿ ಪಂಚೆ, ಬಿಳಿ ಅಂಗಿ, ಕೇಸರಿ ಪೇಟ, ಶಾಲು ಹೊದ್ದು ಗಮನ ಸೆಳೆದರು. 20ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಿದವು. ಮೆರವಣಿಗೆ ಸಾಗುವ ಮಾರ್ಗದ ವಿವಿಧೆಡೆಗಳಲ್ಲಿ ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಆರ್.ಡಿ.ಮಹೇಂದ್ರ ಸೇರಿದಂತೆ ಸಮಿತಿ ಸದಸ್ಯರು ಮೆರವಣಿಗೆ ಮುಂಚೂಣಿಯಲ್ಲಿದ್ದರು. ಜೇಸಿ ವೃತ್ತ ಹಾಗೂ ಭದ್ರಾ ನದಿ ದಡದಲ್ಲಿ ಪಟಾಕಿ ಸಿಡಿಸಲಾಯಿತು. ವಿಗ್ರಹ ಜಲಸ್ತಂಭನೆಗೂ ಮೊದಲು ಭದ್ರಾರತಿ ನೆರವೇರಿಸಲಾಯಿತು. ಬಳಿಕ ದುರ್ಗಾದೇವಿ ವಿಗ್ರಹವನ್ನು ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿತ್ತು. ಬಾಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಪಿಎಸ್‌ಐ ಅಂಬರೀಷ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net