

ಎನ್.ಆರ್.ಪುರ: ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಸಂಸತ್ ಕಲಾಪಗಳು ಹೇಗೆ ನಡೆಯುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವುದೇ ಯುವ ಸಂಸತ್ ಸ್ಪರ್ಧೆ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕದ ಜ್ಞಾನ ಜತೆಗೆ ಪ್ರಾತ್ಯಕ್ಷಿಕೆಯಿಂದ ಕಲಿತರೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಶಾಲಾ ಹಂತದಲ್ಲೇ ಚುನಾವಣೆ ವ್ಯವಸ್ಥೆ, ವಿಧಾನಸಭೆಯಲ್ಲಿ ನಡೆಯುವ ಕಲಾಪಗಳ ಬಗ್ಗೆ ತಿಳಿದೊಂಡಿರಬೇಕು. 18 ವರ್ಷ ತುಂಬಿದ ನಂತರ ನೀವೇ ಮತದಾರರಾಗುತ್ತೀರಿ. ನಂತರ ನೀವೂ ಚುನಾಯಿತ ಪ್ರತಿನಿಧಿಗಳಾಗಬಹುದಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗುತ್ತಾರೆ. ಸಂವಿಧಾನದ ಪ್ರಕಾರವೇ ಚುನಾವಣೆ ನಡೆಯುತ್ತದೆ. ಇಡೀ ಚುನಾವಣೆ ಕುರಿತು ಯುವ ಸಂಸತ್ ಸ್ಪರ್ಧೆಯಲ್ಲಿ ತಿಳಿಸಿಕೊಡಲಾಗುತ್ತದೆ ಎಂದರು.
ನೋಡಲ್ ಅಧಿಕಾರಿ ಸಂಗೀತಾ ಮಾತನಾಡಿ, ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ 5 ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳಿಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.
ಯುವ ಸಂಸತ್ ಸ್ಪರ್ಧೆಯಲ್ಲಿ ತಾಲೂಕಿನ 20 ಪ್ರೌಢಶಾಲೆಗಳ 100 ಮಕ್ಕಳು ಭಾಗವಹಿಸಿದ್ದರು. ತಾಲೂಕು ಪ್ರೌಢಶಾಲೆಗಳ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ.ಟಿ.ವಿಜಯಕುಮಾರ್, ಶೆಟ್ಟಿಕೊಪ್ಪ ಬರ್ಕ್‌ಮನ್ಸ್ ಪ್ರೌಢಶಾಲೆ ಶಿಕ್ಷಕ ದೇವಸಿ, ಅನ್ವಿತಾ ಇದ್ದರು.