ನಲ್ಲಿ ಸಂಪರ್ಕದ ಸರ್ವೇಗೆ ಆಧಾರ್ ಅಡ್ಡಿ Aadhaar hurdles

ಬೀರೂರಿನ ಗೌಡನಬಾವಿ ಬೀದಿಯಲ್ಲಿ ಅಮೃತ್ ಯೋಜನೆಯ ನಲ್ಲಿ ಸಂಪರ್ಕದ ಮೀಟರ್ ಜಿಪಿಎಸ್ ಮಾಡುತ್ತಿರುವ ಸಿಬ್ಬಂದಿ.
ಬೀರೂರಿನ ಗೌಡನಬಾವಿ ಬೀದಿಯಲ್ಲಿ ಅಮೃತ್ ಯೋಜನೆಯ ನಲ್ಲಿ ಸಂಪರ್ಕದ ಮೀಟರ್ ಜಿಪಿಎಸ್ ಮಾಡುತ್ತಿರುವ ಸಿಬ್ಬಂದಿ.
Published on: 

ರಾಜು ಎಂ. ಬೀರೂರು

ಅಮೃತ್ 2.0 ಯೋಜನೆಯಡಿ ಮನೆ ಮನೆಗೆ ನೀಡಿರುವ ನಲ್ಲಿ ಸಂಪರ್ಕದ ಕುರಿತು ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಸಿಬ್ಬಂದಿಗೆ ಕೆಲ ಕುಟುಂಬಸ್ಥರು ಆಧಾರ್ ಕಾರ್ಡ್ ನೀಡಲು ನಿರಾಕರಿಸುತ್ತಿರುವುದರಿಂದ ಸಮೀಕ್ಷೆಗೆ ಹಿನ್ನಡೆಯಾಗುತ್ತಿದೆ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೀರೂರು ಪುರಸಭೆ ಹಾಗೂ ಗುತ್ತಿಗೆದಾರರಿಂದ ಕೈಗೊಂಡ ಅಮೃತ್ 2.0 ಯೋಜನೆಯ ಗೃಹ ಸಂಪರ್ಕಗಳ ಜಿಪಿಎಸ್ ಸರ್ವೇಯನ್ನು ಸಿಬ್ಬಂದಿ ನಡೆಸುತ್ತಿದ್ದಾರೆ. ಕುಟುಂಬದ ಸದಸ್ಯರ ವಿವರ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಮಾಹಿತಿ ಕೇಳಲಾಗುತ್ತಿದೆ. ಹಾಗೂ ನೀಡಿರುವ ಸಂಪರ್ಕಕ್ಕೆ ಮೀಟರ್ ನಂಬರ್ ಮತ್ತು ಫೋಟೋ ಅಪ್‌ಲೋಡ್ ಮಾಡಲಾಗುತ್ತಿದೆ. ಆದರೆ ವೈಯಕ್ತಿಕ ದಾಖಲೆಗಳ ಸುರಕ್ಷೆ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ಕೆಲ ನಾಗರಿಕರು ಆಧಾರ್ ಕಾರ್ಡ್ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಸರ್ವೇ ಸಿಬ್ಬಂದಿ ಸಾರ್ವಜನಿಕರಿಗೆ ಅಮೃತ್ ಯೋಜನೆಯ ಉದ್ದೇಶ ಹಾಗೂ ಮಾಹಿತಿ ಸಂಗ್ರಹಿಸುವ ಅಗತ್ಯ ಕುರಿತು ವಿವರಿಸಿ, ಸಮೀಕ್ಷಾ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಅವರ ಮೇಲೆ ನಂಬಿಕೆ ಬರದ ಜನರು ಅಗತ್ಯ ದಾಖಲೆಗಳ ಬಳಕೆ ಹಾಗೂ ಮಾಹಿತಿಯ ಗೌಪ್ಯತೆ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಈಗಾಗಲೇ ಶೇ.80ರಷ್ಟು ಜಿಪಿಎಸ್ ಮಾಡಲಾಗಿದೆ. ಸಾರ್ವಜನಿಕರ ಅನುಮಾನ ನಿವಾರಿಸಿ, ಸಮೀಕ್ಷೆ ಉದ್ದೇಶ ಸ್ಪಷ್ಟಪಡಿಸುವ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೂ ನೀಡಲಿಲ್ಲವೆಂದರೆ ಬಾಗಿಲು ಮುಚ್ಚಿದೆ ಅಥವಾ ಮಾಹಿತಿ ಇಲ್ಲ ಎಂದು ನಮೂದಿಸಲಾಗುತ್ತ್ತಿದೆ ಎನ್ನುತ್ತಾರೆ ಸಿಬ್ಬಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net