

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ದುರ್ಗಾಮಾತೆ ಉತ್ಸವದಲ್ಲಿ ನಡೆದ ದಾಂಡಿಯಾ ನೃತ್ಯದಲ್ಲಿ ನೂರಾರು ಮಕ್ಕಳು ಮತ್ತು ಮಹಿಳೆಯರೊಂದಿಗೆ ಶಾಸಕಿ ನಯನಾ ಮೋಟಮ್ಮ ನೃತ್ಯ ಮಾಡಿ ಸಂಭ್ರಮಿಸಿದರು.
ಶ್ರೀ ದುರ್ಗಾದೇವಿ ಸೇವಾ ಸಮಿತಿ ಹಾಗೂ ಟ್ರಿನಿಟಿ ಸ್ಕೂಲ್ ಆಫ್ ಡ್ಯಾನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮಲೆನಾಡಿನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಕೋಲಾಟಕ್ಕೆ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗದ ಸಾಂಪ್ರದಾಯಿಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದುರ್ಗಾದೇವಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ದಾಂಡಿಯಾ ನೃತ್ಯ ಆಯೋಜಿಸಲಾಗಿದೆ. ನವರಾತ್ರಿ ದುರ್ಗಾದೇವಿಗೆ ಮುಡಿುಪಾಗಿಟ್ಟಿರುವ ದಿನಗಳಾಗಿದೆ. ಇಂಥ ಸಂದರ್ಭದಲ್ಲಿ ಮಹಿಳೆಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ನವರಾತ್ರಿ ಉತ್ಸವವನ್ನು ಸಂಭ್ರಮಿಸುವ ಜತೆಗೆ ಸಾಂಪ್ರದಾಯಿಕ ಕಲಾ ಪರಂಪರೆ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ತಾಲೂಕಿನ ವಿವಿಧ ಭಾಗದಿಂದ ಮಹಿಳೆಯರು, ಮಕ್ಕಳು ದಾಂಡಿಯ ವಸ್ತ್ರ ಧರಿಸಿ ನೃತ್ಯ ಮಾಡಿದರು.
ಟ್ರಿನಿಟಿ ಸ್ಕೂಲ್ ಆಫ್ ಡ್ಯಾನ್ಸ್ ಮಾಸ್ಟರ್ ಜೀವನ್, ನೃತ್ಯ ಕಲಾವಿದೆ ನಿರೀಕ್ಷಾ, ದುರ್ಗಾದೇವಿ ಸೇವಾ ಸಮಿತಿಯ ನಿರ್ಮಲಾ ಮಂಚೇಗೌಡ ಇತರರಿದ್ದರು.