ಕಾಫಿ ತೋಟಗಳಿಗೆ ನುಗ್ಗಿದ ಕಾಡಾನೆಗಳು

Wild elephants entered coffee plantations
ಮೂಡಿಗೆರೆ ತಾಲೂಕು ಕಾರ್‌ಬೈಲ್ ಗ್ರಾಮದ ಜಿ.ಕೆ.ರಘು ಮನೆಯ ಗೇಟನ್ನು ಕಾಡಾನೆ ಹಾನಿಗೊಳಿಸಿರುವುದು.
ಮೂಡಿಗೆರೆ ತಾಲೂಕು ಕಾರ್‌ಬೈಲ್ ಗ್ರಾಮದ ಜಿ.ಕೆ.ರಘು ಮನೆಯ ಗೇಟನ್ನು ಕಾಡಾನೆ ಹಾನಿಗೊಳಿಸಿರುವುದು.
Published on: 

ಮೂಡಿಗೆರೆ: ಅರಣ್ಯ ಇಲಾಖೆ ಅಧಿಕಾರಿಗಳು ಅಟ್ಟಿಸಿಕೊಂಡು ಬಂದಿರುವ ಸುಮಾರು 38 ಕಾಡಾನೆಗಳು ಶುಕ್ರವಾರ 8 ಗುಂಪುಗಳಾಗಿ ಚದುರಿ ವಿವಿಧ ಗ್ರಾಮಗಳ ಕಾಫಿ ತೋಟಗಳಿಗೆ ನುಗ್ಗಿ ಬೆಳೆ ಧ್ವಂಸಗೊಳಿಸಿವೆ.

ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಸ್ಥಗಿತಗೊಂಡ ಬಳಿಕ 3 ಗುಂಪುಗಳಾಗಿದ್ದ ಕಾಡಾನೆಗಳು ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಕಂಗಾಲಾಗಿ ಆಹಾರ ಹುಡುಕುತ್ತ ಬೇರ್ಪಟ್ಟು ರೊಚ್ಚಿಗೆದ್ದಿವೆ. ಭದ್ರಾ ಅಭಯಾರಣ್ಯಕ್ಕೆ ಸಾಗಿಸುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ದಿಕ್ಕಾಪಾಲಾಗಿರುವ ಕಾಡಾನೆಗಳನ್ನು ನಿಯಂತ್ರಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದೆ.

ಕಳೆದ ವಾರದಿಂದ ಹಲವು ಗ್ರಾಮಗಳಲ್ಲಿ ಕಾಫಿ ತೋಟಕ್ಕೆ ನುಗ್ಗಿ ಕಾಫಿ, ಕಾಳುಮೆಣಸಿನ ಬಳ್ಳಿ, ಏಲಕ್ಕಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಆನೆ ದಾಳಿಯಿಂದ ಬೆಳೆ ಕಳೆದುಕೊಂಡವರ ಪೈಕಿ ಶೇ.90ರಷ್ಟು ಸಣ್ಣ ರೈತರಾಗಿದ್ದಾರೆ. ಇನ್ನೊಮ್ಮೆ ಇದೇ ರೀತಿ ಬೆಳೆ ಬೆಳೆಯಲು 10 ವರ್ಷ ಬೇಕಾಗುತ್ತದೆ. ನಾವೆಲ್ಲರೂ ಬೀದಿಗೆ ಬಿದ್ದಿದ್ದೇವೆ ಎಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಕಾಫಿ ಕೊಯ್ಲಿನ ಸಮಯವಾಗಿದ್ದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಫಸಲಿಗೆ ಬಂದಿರುವ ಕಾಫಿ ಸೇರಿದಂತೆ ಸುಮಾರು 20 ವರ್ಷ ಬೆಳೆಸಿದ ಎಲ್ಲ ಗಿಡಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಯಾವ ಸಮಯದಲ್ಲಾದರೂ ಪ್ರಾಣ ಹಾನಿಯಾಗುವ ಸಾಧ್ಯತೆ ಕೂಡ ಇದೆ. ಕಾಡಾನೆಗಳನ್ನು ಜಿಲ್ಲೆಗೆ ಅಟ್ಟುತ್ತಿರುವುದನ್ನು ವಿರೋಧಿಸಿ ನಂದಿಪುರ ಹಾಗೂ ಮಾಕೋನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರು ಹಾಗೂ ಸಾರ್ವಜನಿಕರು ನ.28ರಿಂದ ಮಾಕೋನಹಳ್ಳಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.