

ಶೃಂಗೇರಿ: ತಾಲೂಕಿನ ಶಾರದಾ ನಗರದಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ವಾರದ ಸಂತೆ ನಡೆಸದಂತೆ ಪಪಂ ವಿರುದ್ಧ ವಿವಿಧ ದಲಿತ ಸಂಘಟನೆಗಳು ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪಪಂ ಮುಂಭಾಗ ಬುಧವಾರ ಪ್ರಾರಂಭಿಸಿದರು.
ದಲಿತ ಸಂಘಟನೆಯ ಮುಖಂಡ ಕೆ.ಎಂ.ಗೋಪಾಲ್ ಮಾತನಾಡಿ, 2011ರಲ್ಲಿ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರದ ಆದೇಶ ಹೊರಡಿಸಲಾಗಿತ್ತು. ಅದರಂತೆ 2018ರಲ್ಲಿ ಶಾರದಾ ನಗರದ ಅಸೆಸ್‌ಮೆಂಟ್ ನಂ. 949/912ರಲ್ಲಿ 100*100 ಜಾಗವನ್ನು ಮೀಸಲಿಟ್ಟಿದ್ದು ಈಗಿನ ಜಾಗದ ಮಾರುಕಟ್ಟೆ ದರದಲ್ಲಿ ಶೇ.25ರಷ್ಟು ಅಂದರೆ 22,07,500 ರೂ. ಜಿಲ್ಲಾ ನಗರಾಭಿವೃದ್ಧಿ ಇಲಾಖೆಗೆ ಸಂಘಟನೆ ಪಾವತಿಸಬೇಕು. ನಂತರ ಜಾಗದಲ್ಲಿ ಭವನ ನಿರ್ಮಾಣ ಅವಕಾಶ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಆದೇಶ ನೀಡಿದ್ದರು. ಆದರೆ ಸಂಘಟನೆ ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲ ಅದರಲ್ಲಿ ಸ್ವಲ್ಪ ಮೊತ್ತ ರಿಯಾಯಿತಿ ಮಾಡಬೇಕು ಎಂದು ಸಂಘಟನೆ ಮನವಿ ಮಾಡಿದ್ದು ಹಣ ಪಾವತಿಸಲು ವಿಳಂಬವಾಗಿತ್ತು. ಪ್ರಸ್ತುತ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಅನೂಪ್ ಸಂಜೋಗ್ ಅವರು ಶಾಸಕರು ಹೇಳಿದ್ದಾರೆ ಎಂದು ವಾರದ ಸಂತೆ ನಡೆಸಲು ಮುಂದಾಗಿದ್ದಾರೆ. ಆ ಸ್ಥಳ ಸ್ವಚ್ಛತೆ ಮಾಡುವಾಗ ಕೆಲಸ ನಿಲ್ಲಿಸಿದ್ದೇವೆ. ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಯಾರಿಗೂ ಬಿಡುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದರು.
ಅಹೋರಾತ್ರಿ ಧರಣಿಯಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರಾದ ಶಂಕರ್, ಸುಮಾ, ಶೀಲಾ ಸುಖೇಶ್, ಜಲಜಾ, ಗೋಪಾಲ್, ರಫೀಕ್ ಅಹಮದ್, ವೈ.ಎಸ್.ಸದಾನಂದ, ಸುರೇಶ್, ಕೆ.ಪಿ.ನಾಗಪ್ಪ, ಮಹೇಶ್, ಕೆ.ಪಿ. ಸಿದ್ದಾರ್ಥ್, ಪುಡಿಯಣ್ಣ ಭಾಗವಹಿಸಿದ್ದರು.