

ಕಡೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಸ್ಥಳಾಂತರ ವಿಚಾರವಾಗಿ ಚರ್ಚೆ, ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಕಡೂರು ತಾಲೂಕಿನ ಹಳೇ ಮದಗದಕೆರೆ ಮೇಲ್ಭಾಗದ ಸಗನಿಬಸವನಹಳ್ಳಿ ಸಮೀಪದ ಸೋಮವಾರ ವಿದ್ಯುತ್ ಪ್ರವಹಿಸಿ ಒಂಟಿ ಸಲಗ ಸಾವನ್ನಪ್ಪಿರುವುದು ಅರಣ್ಯಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಗೆ ಎಚ್ಚರಿಕೆ ಗಂಟೆಯಾಗಿದೆ.
ಡಿಸಿಎಫ್, ಎಸಿಎಫ್ ಹಾಗೂ ಎನ್ ಜಿಒ ಸೇರಿದಂತೆ ಮೆಸ್ಕಾಂ ಅಧಿಕಾರಿಗಳ ಸಮಕ್ಷಮದಲ್ಲಿ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಕಡೂರು ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದರು. ಜಮೀನಿಗೆ ವಿದ್ಯುತ್ ತಂತಿ ಅಳವಡಿಸಿ ಪರಾರಿಯಾಗಿರುವ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎಮ್ಮೆದೊಡ್ಡಿ ಭಾಗದಲ್ಲಿ ವಿದ್ಯುತ್ ಪ್ರವಹಿಸಿ ಆನೆ ಸಾವನ್ನಪ್ಪಿರುವುದು ಇದೇ ಮೊದಲಲ್ಲ. 2020ರ ಜುಲೈನಲ್ಲಿ ಎಮ್ಮೆದೊಡ್ಡಿ ಸಮೀಪ ವಿದ್ಯುತ್ ಬೇಲಿ ತಗುಲಿ ಮೂರು ವರ್ಷದ ಗಂಡಾನೆ ಸಾವನ್ನಪ್ಪಿತ್ತು. ಅದಕ್ಕೂ ಹಿಂದಿನ ವರ್ಷ ಇದೇ ಭಾಗದಲ್ಲಿ ಮತ್ತೊಂದು ಗಂಡಾನೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿತ್ತು. ಹಿಂದಿನ ಘಟನೆಗಳಿಂದ ಪಾಠ ಕಲಿತು ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದರಿಂದ ಬೆಳೆ ರಕ್ಷಣೆ ನೆಪದಲ್ಲಿ ವನ್ಯಜೀವಿಗಳು ಜೀವಕಳೆದುಕೊಳ್ಳುತ್ತಿವೆ.
ಅರಣ್ಯ ಅಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದರಿಂದ ಬೆಳೆ ರಕ್ಷಣೆಗಾಗಿ ಕೆಲವರು ಜಮೀನಿನ ಸುತ್ತ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸುತ್ತಿರುವುದು ವನ್ಯಜೀವಿಗಳ ಜೀವಕ್ಕೆ ಸಂಚಕಾರ ತಂದಿದೆ. ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಇಂಥ ಅಕ್ರಮ ಬೇಲಿಗಳು ಆನೆ ಮಾತ್ರವಲ್ಲ ಇತರ ಕಾಡುಪ್ರಾಣಿ ಹಾಗೂ ಮನುಷ್ಯರ ಜೀವಕ್ಕೂ ಅಪಾಯಕಾರಿಯಾಗಿವೆ. ರೈತರು ಬೆಳೆ ರಕ್ಷಣೆಗಾಗಿ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಪರಾಧ.
ಕಾಡಾನೆಗಳು ರೈತರ ಶತ್ರುಗಳಲ್ಲ, ರೈತರೂ ಕಾಡಾನೆಗಳ ಶತ್ರುಗಳಲ್ಲ. ಇಬ್ಬರ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸುವುದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ರೈತರ ಬೆಳೆ ರಕ್ಷಣೆ ಹಾಗೂ ವನ್ಯಜೀವಿಗಳ ಜೀವಕ್ಕೂ ಭದ್ರತೆ ದೊರೆಯುವಂತಹ ಸಮಗ್ರ ಯೋಜನೆ ರೂಪಿಸಿದಾಗ ಮಾತ್ರ ಇಂಥ ದುರಂತಗಳಿಗೆ ಕಡಿವಾಣ ಹಾಕಲು ಸಾಧ್ಯ.
ಎಮ್ಮೆದೊಡ್ಡಿ ಮೇಲ್ಭಾಗದಲ್ಲಿ ಆನೆಗಳು ಸಾವನ್ನಪ್ಪಿದ್ದರೂ ಅರಣ್ಯ ಅಂಚಿನ ಜಮೀನುಗಳಲ್ಲಿ ಅಕ್ರಮ ವಿದ್ಯುತ್ ಬೇಲಿಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅರಣ್ಯ, ಮೆಸ್ಕಾಂ ಅಧಿಕಾರಿಗಳು ಜಂಟಿಯಾಗಿ ಅರಣ್ಯಅಂಚಿನ ಗ್ರಾಮಗಳ ಜಮೀನುಗಳನ್ನು ಪರಿಶೀಲಿಸಿ ಅಪಾಯಕಾರಿ ವಿದ್ಯುತ್ ಸಂಪರ್ಕಗಳನ್ನು ತಕ್ಷಣ ತೆರವುಗೊಳಿಸಬೇಕು. ಅನುಮಾನಾಸ್ಪದ ವಿದ್ಯುತ್ ಸಂಪರ್ಕಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ಹಾಗೂ ದೂರು ವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ಅರಣ್ಯ ಇಲಾಖೆ, ಮೆಸ್ಕಾಂ, ಕೃಷಿ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಡುವೆ ಸಮನ್ವಯ ಅಗತ್ಯವಿದೆ.
ಸಿದ್ದರಹಳ್ಳಿ, ಹಳೇ ಸಿದ್ದರಹಳ್ಳಿ, ಬಿಳಿಚೇನಹಳ್ಳಿ, ಕಲ್ಲುಹೊಳೆ, ಕೋಟೆ, ಸಗನಿಬಸವನಹಳ್ಳಿ ಭಾಗದ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳು ಹೆಚ್ಚಾಗಿ ಸಂಚರಿಸುವ ಮಾರ್ಗಗಳನ್ನು ವೈಜ್ಞಾನಿಕವಾಗಿ ಗುರುತಿಸಿ ನಕ್ಷೆ ಸಿದ್ಧಪಡಿಸಬೇಕು. ಆನೆಗಳ ನೈಸರ್ಗಿಕ ಸಂಚಾರ ಮಾರ್ಗಗಳಲ್ಲಿ ಕೃಷಿ ಚಟುವಟಿಕೆ, ವಿದ್ಯುತ್ ಬೇಲಿ ಹಾಗೂ ಇತರ ಅಪಾಯಕಾರಿ ಅಡೆತಡೆಗಳ ಬಗ್ಗೆ ನಿಗಾ ವಹಿಸಬೇಕು.
ಕಾಮೇನಹಳ್ಳಿ ಅರಣ್ಯ ಪ್ರದೇಶದಿಂದ ಆಹಾರಕ್ಕಾಗಿ ಬಂದಿರುವ ಒಂಟಿ ಆನೆ ಜೋಳದ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಮೀನು ಮಾಲೀಕನ ವಿರುದ್ಧ ಕಾನೂನು ಕ್ರಮಕೈಗೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರದೀಪ್ ನಾಯ್ಕ ಕಡೂರು ಆರ್ಎಫ್ಒ