

ಶೃಂಗೇರಿ: ನವರಾತ್ರಿ ಮಹೋತ್ಸವ ಸಲುವಾಗಿ ಬುಧವಾರ ಶ್ರೀಶಾರದಾ ಪರಮೇಶ್ವರಿ ಕೈಯಲ್ಲಿ ಶಕ್ತಾಯುಧವನ್ನು ಧರಿಸಿ ನವಿಲನ್ನು ಏರಿ ಕುಮಾರಸ್ವಾಮಿ ಶಕ್ತಿಯಾಗಿ ಭಕ್ತರನ್ನು ಮಯೂರವಾಹನಾಲಂಕಾರದಲ್ಲಿ ಅನುಗ್ರಹಿಸಿದಳು.
ಶ್ರೀಮಠದಲ್ಲಿ ವರಚತುರ್ಥಿ, ಮಹಾಗಣಪತಿ ಹೋಮ, ಶ್ರೀ ಶಕ್ತಿಗಣಪತಿ ಸನ್ನಿಧಿಯಲ್ಲಿ ಲಕ್ಷದೂರ್ವಾಚನೆ ನೆರವೇರಿತು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ ಹಾಗೂ ದುರ್ಗಾ ಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಸೂತಸಂಹಿತೆ ಪಾರಾಯಣಗಳು, ಸೂರ್ಯ ನಮಸ್ಕಾರ, ಶ್ರೀಸೂಕ್ತಜಪ, ದುರ್ಗಾಜಪ, ಭುವನೇಶ್ವರಿ ಜಪ ಶ್ರೀಮಠದಲ್ಲಿ ನೆರವೇರಿತು. ಸುವಾಸಿನೀ ಹಾಗೂ ಕುಮಾರೀಪೂಜೆ ಜರುಗಿತು.
ಜಗದ್ಗುರುಗಳು ಶ್ರೀಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರು ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ ನೆರವೇರಿತು. ನಂತರ ಶ್ರೀಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಬೀದಿ ಉತ್ಸವದಲ್ಲಿ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಭಾಗವಹಿಸಿದರು. ಶ್ರೀರಾಮಸೇವಾ ಸಮಿತಿ, ಕಾಳಿಕಾಂಬಾ ಭಜನಾಮಂಡಳಿ, ಕೆರೆ ಚೌಡೇಶ್ವರಿ ಭಕ್ತ ಮಂಡಳಿ, ದುರ್ಗಾದೇವಸ್ಥಾನದ ಸಮಿತಿ, ವೈಭವಿ ಸೀಶಕ್ತಿ ಸಂಘ. ಜಯಭಾರತೀ ವಿದ್ಯಾಲಯ, ಅಕ್ರುವಳ್ಳಿ ಬಡಾವಣೆ ಗ್ರಾಮಸ್ಥರು, ತಾಲೂಕು ಮಲೆನಾಡು ಭೋವಿ ಸಂಘ, ಜಿಲ್ಲಾ ದೇವಾಡಿಗರ ಸುಧಾರಕರ ಸಂಘ, ಶ್ರೀಉಳ್ಳುವಳ್ಳಿ ವಡ್ಡಮಲ್ಲೇಶ್ವರ ಸಂಘ, ಜೆಸಿಬಿಎಂ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ವಿಶ್ವಭಾರತೀ ಸೇವಾ ಟ್ರಸ್ಟ್ ಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀರವಿಭಾಗವತರ್ ಮೆಲರ್ಕೋಡ್ ಅವರಿಂದ ನಾಮಸಂಕೀರ್ತನೆ ಜರುಗಿತು.
ಶ್ರೀಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಶ್ರೀಶಾರದಾ ದೇವಾಲಯಕ್ಕೆ ಅಗಮಿಸಿದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ನಂತರ ಬಂಗಾರದ ರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳ ಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾ ಮಂಗಳಾರತಿ, ವೇದಗಳ ಪಾರಾಯಣ, ಸರ್ವ ಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕವಿಧಾನಗಳು ನೆರವೇರಿತು. ದರ್ಬಾರು ಮುಕ್ತಾಯದ ನಂತರ ಯತಿವರ್ಯರು ಆಸೀನರಾದ ಸಿಂಹಾಸನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅದ್ವೈತ ಸಿದ್ಧಾಂತವನ್ನು ಪುರುಜ್ಜೀವನಗೊಳಿಸಿ ಭಾರತದಲ್ಲಿ ಶ್ರೀ ಶಂಕರಭಗವತ್ಪಾದರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಪ್ರಥಮ ಪೀಠ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠವು ತುಂಗ ಭದ್ರಾತೀರದಲ್ಲಿ ವಿರಾಜಮಾನವಾಗಿದೆ. ಶ್ರೀಶಾರದೆ ಈ ಪೀಠದ ಅದೇವತೆ. ಲೋಕಗುರು ಶ್ರೀಶಂಕರಾಚಾರ್ಯರ ಪ್ರಧಾನ ಶಿಷ್ಯರಾದ ಜಗದ್ಗುರು ಶ್ರೀಸುರೇಶ್ವರಾಚಾರ್ಯರಿಂದ ಆರಂಭಿಸಿ ಇಂದಿನವರೆಗೂ ಅವಿಚ್ಛಿನ್ನವಾದ ಗುರು ಪರಂಪರೆ ಇಲ್ಲಿದೆ. ಇಲ್ಲಿ ನಡೆಯುವ ಎಲ್ಲ ಉತ್ಸವಗಳಲ್ಲಿ ಅತ್ಯಂತ ಪ್ರಮುಖವಾದುದು ಶ್ರೀಶರನ್ನವರಾತ್ರಿ ಮಹೋತ್ಸವ. ಪ್ರತಿನಿತ್ಯ ನಡೆಯುವ ಪಾರಾಯಣಗಳು, ಜಪಗಳು,ಯಾಗಗಳು ಲೋಕಕಲ್ಯಾಣಕ್ಕಾಗಿ ಎಂಬುದು ಐತಿಹ್ಯ.