ಹಂಸವಾಹನಾರೂಢ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶ್ರೀ ಶಾರದೆ

ಶೃಂಗೇರಿ ಶ್ರೀ ಶಾರದೆಯು ಬ್ರಾಹ್ಮಿಯಾಗಿ ಕಂಗೊಳಿಸಿದಳು.
ಶೃಂಗೇರಿ ಶ್ರೀ ಶಾರದೆಯು ಬ್ರಾಹ್ಮಿಯಾಗಿ ಕಂಗೊಳಿಸಿದಳು.
Published on: 

ಶೃಂಗೇರಿ: ನವರಾತ್ರಿ ಉತ್ಸವದ ಪ್ರಯುಕ್ತ ಸೋಮವಾರ ಶ್ರೀಜಗನ್ಮಾತೆ ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರನ್ನು ಅನುಗ್ರಹಿಸಿದಳು.

ಜಗನ್ಮಾತೆಯ ವಿಶೇಷ ಪೂಜೆಗಾಗಿ ವಾದ್ಯಗೋಷ್ಠಿಯೊಂದಿಗೆ ಆರ್ಚಕರು ಆನೆ ಮೇಲೆ ಗಂಗೆಯನ್ನು ಹೊತ್ತುಕೊಂಡು ಶ್ರೀ ಶಾರದಾ ಮಠಕ್ಕೆ ತರಲಾಯಿತು. ಶ್ರೀಮಠದಲ್ಲಿ ವೇದ-ಪುರಾಣಗಳ ಪಾರಾಯಣಿಗಳು, ಶ್ರೀಶಾರದೆ ಡೋಲೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಪಂ ಭಕ್ತಾದಿಗಳು, ಅಗಳಗಂಡಿ, ಜಯಪುರ, ಮೇಗುಂದ ಹೋಬಳಿ ಭಕ್ತಾದಿಗಳು, ಗೀರ್ವಾಣಿ ಮಹಿಳಾ ಮಂಡಳಿ ಮೆಣಸೆ, ಶ್ರೀರಾಮ ಸೇವಾ ಸಮಿತಿ ಹುಲ್ಸಗಾರು, ಪ್ರಜ್ಞಾ ಯುವಕ ಸಂಘ, ಆದರ್ಶ ರೈತಮಿತ್ರ ಕೂಟ, ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ,ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಭಜನಾ ಮಂಡಳಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಅಶ್ವಿನ್ ಭಾಗವತರ್ ಚೆನ್ಹ್ತ್ರೈ ಅವರಿಂದ ನಾಮಸಂಕೀರ್ತನೆ ನೆರವೇರಿತು.

ಶ್ರೀಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ದೇವಾಲಯವನ್ನು ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಇರುವ ಶ್ರೀಶಾರದೆ ಮೂರ್ತಿಯನ್ನು ಬಂಗಾರದ ರಥದಲ್ಲಿ ಕೂರಿಸಿ ದೇವಾಲಯದ ಒಳ ಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಅಸೀನರಾದ ನಂತರ ವೇದಗಳ ಪಾರಾಯಣ,ಪಂಚಾಂಗ ಶ್ರವಣ, ಸಂಗೀತ, ಸರ್ವವಾದ್ಯ ಸೇವೆ ನಡೆಯಿತು. ದೇವಿಗೆ ಮಹಾಮಂಗಳಾರತಿ ನೆರವೇರಿತು.

ಜಗದ್ಗುರುಗಳ ಕಾರ್ಯಕ್ರಮಗಳು

ಇಲ್ಲಿನ ಜಗದ್ಗುರುಗಳು ಗುರುಪರಂಪರೆ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಶ್ರೀ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿ ದಿನ ಭಾಗವಹಿಸಿ ಶ್ರೀ ಶಂಕರಭಗವತ್ಪಾದರು ನೀಡಿದ ಅನುಷ್ಠಾನ ಪದ್ಧತಿಗಳನ್ನು ತಪ್ಪದೇ ನಿರ್ವಹಿಸುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಆಹ್ನಿಕ, ಅನುಷ್ಠಾನಗಳ ನಂತರ ಗುರುಪಾದುಕೆಗಳಿಗೆ, ಶ್ರೀಚಕ್ರಕ್ಕೆ ಯತಿವರ್ಯರು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಶ್ರೀಮಠದ ಎಲ್ಲ ದೇವಾಲಯಗಳಿಗೆ ಭೇಟಿ ನೀಡಿ ಶ್ರೀ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಂಜೆ ಗುರುನಿವಾಸದಲ್ಲಿ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸುತ್ತಾರೆ. ಸಂಜೆ ಶ್ರೀ ಶಾರದಾಂಬೆ ರಥೋತ್ಸವಕ್ಕೆ ಆಗಮಿಸಿದ ನಂತರ ನರಸಿಂಹವನದ ಚಂದ್ರಮೌಳಿಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದರ್ಬಾರಿಗೆ ಪೂಜೆ ಸಲ್ಲಿಸುತ್ತಾರೆ.

ಮಂಗಳವಾರ ವೃಷಭವಾಹನಾಲಂಕಾರ

ಅಶ್ವಯುಜ ಶುಕ್ಲ ತೃತೀಯಾ ಮಂಗಳವಾರ ಶ್ರೀ ಜಗನ್ಮಾತೆ ವೃಷಭವಾಹನಾಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಈಶ್ವರಗಿರಿ ಶ್ರೀಭವಾನಿ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ನವಚಂಡಿಕಾ ಹೋಮ ನಡೆಯಲಿದೆ. ವಿದ್ವಾನ್ ಶ್ರೀ ಗೌತಮ್ ಕಣ್ಣನ್ ಭಾಗವತರ್, ಕೊಯಮುತ್ತೂರು ಇವರಿಂದ ನಾಮ ಸಂಕೀರ್ತನೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net