ಏಷ್ಯನ್ ಗೇಮ್ಸ್‌ನಲ್ಲಿ ಮಲೆನಾಡ ಕಂಪನ್ನು ಸಾರಿದ ಶಾನುವಳ್ಳಿಯ ಸ್ನೇಹಾ

ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕೊಪ್ಪದ ಶಾನುವಳ್ಳಿಯ ಎಸ್.ಎಸ್.ಸ್ನೇಹಾ  ಅವರನ್ನು ತೆರೆದ ವಾಹನದಲ್ಲಿ ಮೆರವಣೆಗೆ ಮಾಡಲಾಯಿತು.
ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕೊಪ್ಪದ ಶಾನುವಳ್ಳಿಯ ಎಸ್.ಎಸ್.ಸ್ನೇಹಾ ಅವರನ್ನು ತೆರೆದ ವಾಹನದಲ್ಲಿ ಮೆರವಣೆಗೆ ಮಾಡಲಾಯಿತು.
Published on: 

ಕೊಪ್ಪ: ಮೊದಲ ಪ್ರಯತ್ನದಲ್ಲಿ ನಿರೀಕ್ಷಿತ ಲ ಸಿಗದಿದ್ದರೂ ಪ್ರಯತ್ನ ಬಿಡದೆ ನಿರಂತರವಾಗಿ ಪರಿಶ್ರಮ ಪಟ್ಟಿದ್ದರಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಎಸ್.ಎಸ್.ಸ್ನೇಹಾ ಹೇಳಿದರು.

ಶಾನುವಳ್ಳಿಗೆ ಆಗಮಿಸಿದ ಎಸ್.ಎಸ್.ಸ್ನೇಹಾಗೆ ತಾಲೂಕು ಆಡಳಿತ ಹಾಗೂ ವಿವಿಧ ಸಂಘ, ಸಂಸ್ಥೆಗಳು ಹಮ್ಮಿಕೊಂಡಿದ್ದ ಅಭಿನಾಂದನಾ ಸಭೆಯಲ್ಲಿ ಮಾತನಾಡಿ, ಸತತ ಪ್ರಯತ್ನ, ದೇವರು, ತಂದೆ-ತಾಯಿ, ಗುರುಗಳು, ಕೋಚ್‌ಗಳ ಆಶೀರ್ವಾದ ಹಾಗೂ ನನ್ನನ್ನು ಪ್ರೀತಿಸಿ ಪ್ರೋತ್ಸಾಹಿಸಿದ ಎಲ್ಲರ ಹಾರೈಕೆಯಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ಎಂದರು.

ಕರೊನಾ ಸಂದರ್ಭದಲ್ಲಿ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ವಿನಯ್ ಗುರೂಜಿ ಸೇರಿದಂತೆ ಹಲವರು ನೀಡಿದ ಸಹಾಯ ಮತ್ತು ಪ್ರೋತ್ಸಾಹವನ್ನು ಎಂದಿಗೂ ಮರೆಯುವುದಿಲ್ಲ. ನಮ್ಮ ಮನೆಗೆ ರಸ್ತೆ ಸಂಪರ್ಕದ ಸಮಸ್ಯೆ ಇದ್ದಾಗ ಶಾಸಕರು ರಸ್ತೆ ನಿರ್ಮಿಸಿ ಕೊಟ್ಟಿರುವುದನ್ನು ಸ್ಮರಿಸಿದರು.

ಶಾಸಕ ರಾಜೇಗೌಡ ಮಾತನಾಡಿ, ಜಪಾನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಶ್ಯಾನುವಳ್ಳಿ ಗ್ರಾಮದ ಕೀರ್ತಿ ಬೆಳಗಿಸಿದ ಸ್ನೇಹಾ ಅವರ ಸಾಧನೆ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಸ್ನೇಹಾ ಅವರ ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸವೇ ಈ ಸಾಧನೆಯ ಹಿಂದಿನ ಪ್ರಮುಖ ಶಕ್ತಿ. ಅವರ ಸಾಧನೆ ತಾಲೂಕಿನ ಪ್ರತಿಯೊಬ್ಬ ಕ್ರೀಡಾಪಟುವಿಗೂ ಸ್ಫೂರ್ತಿಯಾಗಲಿ. ಇನ್ನಷ್ಟು ಎತ್ತರದ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.

ಸ್ನೇಹಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಶಿಾರಸ್ಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಾಧ್ಯವಾಗುವ ಸಹಾಯ ಮತ್ತು ಪ್ರೋತ್ಸಾಹ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಶಾನುವಳ್ಳಿಗೆ ಆಗಮಿಸಿದ ಸ್ನೇಹಾ ಅವರನ್ನು ಶಾಸಕ ರಾಜೇಗೌಡರು ಹಾರ ಹಾಕಿ ಬರ ಮಾಡಿಕೊಂಡರು. ಮಾವಿನಕಟ್ಟೆ ಜಾಟಿಗೇಶ್ವರ ದೇವಸ್ಥಾನದಿಂದ ನಿಲುವಾಗಿಲು ಈಶ್ವರ ದೇವಸ್ಥಾನದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ತೆರೆದ ಜೀಪ್‌ನಲ್ಲಿ ಶಾಸಕರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸ್ನೇಹಾ ಮೆರವಣಿಗೆಯಲ್ಲಿ ಸಾಗಿದರು. ನೂರಾರು ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net