ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಸಾರ್ವಜನಿಕರ ಅಭಿವೃದ್ಧಿಗೆ ಶ್ರಮಿಸಿ

ಮೂಡಿಗೆರೆಯ ಮಾಕೋನಹಳ್ಳಿಯಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಹ ಕಾರ್ಯಕ್ರಮವನ್ನು ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು.
ಮೂಡಿಗೆರೆಯ ಮಾಕೋನಹಳ್ಳಿಯಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಹ ಕಾರ್ಯಕ್ರಮವನ್ನು ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು.
Published on: 

ಮೂಡಿಗೆರೆ: ಸಹಕಾರಿ ಸಂಸ್ಥೆಗಳು ಲಾಭ ನಷ್ಟದ ಲೆಕ್ಕಾಚಾರದಿಂದ ಹೊರಬಂದು ಜನರ ಅಭಿವೃದ್ಧಿಗೆ ಶ್ರಮಿಸಿದರೆ ಸಾರ್ವಜನಿಕರಿಗೆ ಆಸರೆಯಾಗುವ ಜತೆಗೆ ಸಂಸ್ಥೆಗಳು ನಷ್ಟದಿಂದ ಹೊರಬಂದು ಲಾಭದತ್ತ ಮುನ್ನುಗಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ತಾಲೂಕಿನ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗದೆ, ಸಮಾಜದ ಏಳಿಗೆ ಮತ್ತು ಸುಧಾರಣೆ ಆಶಯದೊಂದಿಗೆ ಸಾಗಿದಾಗ ಮಾತ್ರ ಬದುಕಿಗೂ ನಿಜವಾದ ಅರ್ಥ ಸಿಗುತ್ತದೆ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ರೈತರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿದೆ. ಸಂಸ್ಥೆಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಬದುಕು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಾಕೋನಹಳ್ಳಿ, ಬಣಕಲ್, ಇಡಕಣಿ ಸಹಕಾರ ಸಂಸ್ಥೆಯಂತೆ ಎಲ್ಲ ಸಹಕಾರಿ ಸಂಸ್ಥೆಗಳು ಮುಂಚೂಣಿಯಲ್ಲಿ ಸಾಗಬೇಕು ಎಂದು ಹೇಳಿದರು.

ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ಥ್ು ಮಾತನಾಡಿ, ನಮ್ಮ ಸಂಸ್ಥೆ ಆರಂಭದಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 86 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ರೈತರಿಗೆ ಅಗತ್ಯ ಗೊಬ್ಬರ, ಕೃಷಿ ಯಾಂತ್ರೀಕರಣ, ಸಾಲ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ಸವಲತ್ತು ನೀಡಲಾಗುತ್ತಿದೆ. ಇದು ರೈತರಿಗೆ ವರದಾನವಾಗಿದೆ ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಜೆ.ದಿನೇಶ್, ಕೆಜಿಎಫ್ ಅಧ್ಯಕ್ಷ ಎಚ್.ಬಿ.ಶಿವಣ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್, ಟಿಎಪಿಸಿಎಂಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಜಿಪಂ ಮಾಜಿ ಉಪಾಧ್ಯಕ್ಷೆ ಕೆ.ರಾಜಮ್ಮ, ಓ.ಎಸ್.ಗೋಪಾಲಗೌಡ, ಬಿ.ಎಸ್.ನಾರಾಯಣಗೌಡ, ರಾಜೇಂದ್ರ ಪ್ರಸಾದ್, ಎಂ.ಎಸ್.ದಯಾನಂದ್, ಡಿ.ಬಿ.ಜಯಪ್ರಕಾಶ್, ಪುಟ್ಟಮ್ಮ, ಭಾನುಮತಿ, ಎಚ್.ಕೆ.ಪೂರ್ಣೇಶ್, ಎಚ್.ಟಿ.ಪ್ರಸನ್ನ, ಎಂ.ಜಿ.ಪ್ರವೀಣ್, ಎಂ.ಎಸ್.ಪ್ರಸನ್ನ, ಡಿ.ಜಿ.ರಂಜಿತ್ ಇತರರಿದ್ದರು.

ರಾಜಕಾರಣಿಗಳು ಭಾಷಣ ಮಾಡುವಾಗ ರೈತರನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ಆದರೆ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಮರೆತು ಹೋಗುತ್ತದೆ. ರೈತರ ಬದುಕು ಹಸನಾಗ ಬೇಕಾದರೆ ಕೇವಲ ಭಾಷಣಗಳಲ್ಲಿ ರೈತಪರ ಕಾಳಜಿ ವ್ಯಕ್ತಪಡಿಸಿದರೆ ಸಾಲದು. ಸಮಸ್ಯೆಗಳಿಗೆ ಸ್ಪಂದಿಸಿ ಕೃಷಿಗೆ ಪೂರಕವಾದ ಅನುಕೂಲಕರ ವಾತಾವರಣ ಕಲ್ಪಿಸಿಕೊಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿಭಾಯಿಸಬೇಕು.

ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಮಾಜಿ ಉಪಸಭಾಪತಿ