22ರೊಳಗೆ ಚಿತ್ರದುರ್ಗ ಕಾಲುವೆಗೆ ಭದ್ರಾ ನೀರು ಹರಿಸಿ (Bhadra water)
ಕಡೂರಿನ ಕಲ್ಕರೆ ಗ್ರಾಮದಲ್ಲಿ ರೈತರೊಂದಿಗೆ ನಡೆದ ಸಭೆಯಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿದರು. ಬಿದರೆ ಜಗದೀಶ್, ಸಿಗೇಹಡ್ಲು ಹರೀಶ್, ಮಹೇಶ್ವರಪ್ಪ ಮತ್ತಿತರರಿದ್ದರು.
Published on:
Copied
Follow Us
ಕಡೂರು: ಚಿತ್ರದುರ್ಗ ಕಾಲುವೆ ಮೂಲಕ ಭದ್ರಾ ನೀರು ಹರಿದರೆ ಅಬ್ಬಿನಹೊಳಲು ಹಳ್ಳದ ಮೂಲಕ ಕುಕ್ಕಸಮುದ್ರ ಕೆರೆಗೆ ನೀರು ಹರಿಸುವ ಅವಕಾಶವಿದ್ದು ಆ.22ರೊಳಗೆ ಚಿತ್ರದುರ್ಗ ಕಾಲುವೆಗೆ ನೀರು ಹರಿಸದಿದ್ದರೆ ರಾಜ್ಯ ಸರ್ಕಾರದ ಗಮನ ಸೆಳೆಯಲು ತಾಲೂಕಿನ ಕಲ್ಕೆರೆಯಿಂದ ಚಿಕ್ಕಮಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ತಿಳಿಸಿದರು.
ಕಲ್ಕೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಒಣಗಿರುವ ಕುಕ್ಕಸಮುದ್ರ ಕೆರೆಗೆ ಭದ್ರಾ ನೀರು ಬಂದರೆ ಈ ಭಾಗದ ರೈತರಿಗೆ ಬಹಳ ಅನುಕೂಲವಾಗುತ್ತದೆ. ಈ ಕುರಿತು ಸ್ವಯಂ ವರದಿ ತಯಾರಿಸಿ ಅದನ್ನು ಡಿಸಿ, ಸಚಿವರು, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೂ ನೀಡಲಾಗಿತ್ತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಈ ಭಾಗಕ್ಕೆ ಬಂದಾಗ ಕುಕ್ಕಸಮುದ್ರ ಕೆರೆಗೆ ಭದ್ರಾ ನೀರನ್ನು ಶೀಘ್ರ ಹರಿಸುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಶಾಸಕ ಕೆ.ಎಸ್.ಆನಂದ್ ಅವರೂ ಇದರ ಬಗ್ಗೆ ಗಮನ ಸೆಳೆದಿದ್ದರು. ಆದರೆ ಇಷ್ಟು ದಿನವಾದರೂ ನೀರು ಬರುವ ಲಕ್ಷಣ ಕಾಣದಿದ್ದಾಗ ಅಬ್ಬಿನಹೊಳಲು, ಹೆಗಡೆಹಳ್ಳಿ, ಅಜ್ಜಂಪುರ ಗಡಿ, ಕಡೂರು ಭಾಗದಲ್ಲಿ ಸಂಚರಿಸಿ ನೀರು ಬಾರದಿರಲು ಇರುವ ವಾಸ್ತವ ಸ್ಥಿತಿ ಪರಿಶೀಲಿಸಿದ್ದೇನೆ ಎಂದು ತಿಳಿಸಿದರು.
ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಕೋಡಿಹಳ್ಳಿ ಮಹೇಶ್ವರಪ್ಪ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರೇಮ್ಕುಮಾರ್, ಸೀಗೆಹಡ್ಲು ಹರೀಶ್, ಚೌಳಹಿರಿಯೂರು ಅಶೋಕ್, ಹಾಲುಸಿದ್ದಪ್ಪ, ಆಸಂದಿ ಓಂಕಾರ್, ಬೀರೂರು ಮೋಹನ್, ಶೇಖರಪ್ಪ, ಶಿವಶಂಕರಪ್ಪ, ಯತೀಶ್, ಕಡೂರು ಹರ್ಷಿತ್ ಇದ್ದರು.