

ತರೀಕೆರೆ: ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಮಹಾತ್ಮ ಗಾಂಧಿ ವೃತ್ತದ ಸುತ್ತಳತೆ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ವ್ಯವಸ್ಥಾಪಕ ಸಂದೀಪ್ ಹಾಗೂ ಬ್ಯಾನರ್ ಹಾವಳಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಪುರಸಭೆ ವ್ಯವಸ್ಥಾಪಕ ಪರಶುರಾಮ್‌ಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಎನ್.ಶರತ್ ಮಾತನಾಡಿ, ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಡುವೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಹಾತ್ಮ ಗಾಂಧಿ ವೃತ್ತದ ವಿಸ್ತೀರ್ಣ ಹೆಚ್ಚಾಗಿದ್ದು, ಅಕ್ಕಪಕ್ಕ ಇಕ್ಕಟ್ಟಿನಿಂದ ಕೂಡಿರುವ ರಸ್ತೆ ಸಂಚಾರ ದುಸ್ತರವಾಗಿದೆ ಎಂದು ದೂರಿದರು.
ಎಂ.ಜಿ ಸರ್ಕಲ್ ಸುತ್ತಮುತ್ತಲ ಪ್ರದೇಶ ಜನ ಸಂದಣಿಯಿಂದ ಕೂಡಿದ್ದು, ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ವೃತ್ತದಿಂದ ಸಮಸ್ಯೆ ಮತ್ತಷ್ಟು ದುಪ್ಪಟ್ಟಾಗುವ ಸಾಧ್ಯತೆ ಇದೆ. ಅಧಿಕಾರಿಗಳು ವೃತ್ತದ ವಿಸ್ತೀರ್ಣ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.
ಇನ್ನೂ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳು, ಶುಭ ಕೋರುವ ಸಲುವಾಗಿ ಪ್ರತಿ ದಿನ ಅಳವಡಿಸುತ್ತಿರುವ ಬ್ಯಾನರ್ ಹಾವಳಿ ಮಿತಿ ಮೀರಿದೆ. ಪಾದಚಾರಿಗಳಲ್ಲದೆ, ದ್ವಿಚಕ್ರ ವಾಹನ ಸವಾರರು ಆಯಕಟ್ಟಿನ ಜಾಗ ಆಕ್ರಮಿಸಿಕೊಂಡಿರುವ ಬ್ಯಾನರ್ ನೋಡುವ ಭರದಲ್ಲಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಅಪಾಯ ಎದುರಾಗಿದೆ. ಬೇಕಾಬಿಟ್ಟಿ ಅಳವಡಿಸುತ್ತಿರುವ ಬ್ಯಾನರ್ ಹಾವಳಿ ನಿಯಂತ್ರಿಸಲು ಪುರಸಭೆ ಅಧಿಕಾರಿಗಳು ಕಾರ್ಯ ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಸದಸ್ಯರಾದ ವರುಣ್, ಕುಮಾರ್, ಸಾಗರ್, ಪಿ.ಭರತ್, ಟಿ.ಎಂ.ಸಂಜಯ್, ಜೀವನ್ ಇದ್ದರು.
ಪಟ್ಟಣದ ಮುಖ್ಯರಸ್ತೆ ಮಧ್ಯೆ ನಿರ್ಮಿಸುತ್ತಿರುವ ದೊಡ್ಡ ವೃತ್ತದ ಜತೆ ಆಯಕಟ್ಟಿನ ಜಾಗದಲ್ಲಿ ಅಳವಡಿಸುತ್ತಿರುವ ಬ್ಯಾನರ್ ಹಾವಳಿಯಿಂದ ಎದುರಾಗಬಹುದಾದ ಸಮಸ್ಯೆ ಗಮನಿಸಿ ವಿಜಯವಾಣಿ ಸೆ.30ರಂದು ವಿಸ್ತಾರ ವೃತ್ತದಿಂದಲೇ ತೊಂದರೆ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಅರಿತು ಜಾಗೃತರಾದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕ ಪದಾಧಿಕಾರಿಗಳು ವೃತ್ತ ವಿಸ್ತೀರ್ಣ ಕಡಿಮೆಗೊಳಿಸಬೇಕು ಹಾಗೂ ಬ್ಯಾನರ್ ಹಾವಳಿ ನಿಯಂತ್ರಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.